ಬಾಡಿಗೆ ತಾಯ್ತನದ ಹೆಸರಿನಲ್ಲಿ ಮಕ್ಕಳ ಕದ್ದು ತಂದು ಮಾರಾಟ ಪ್ರಕರಣ ; ವಕೀಲೆ ಬಂಧನ
ಬಾಡಿಗೆ ತಾಯ್ತನ ಪ್ರಕರಣದಲ್ಲಿ ಮಕ್ಕಳನ್ನು ಕಳ್ಳ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದ ವಕೀಲೆಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ.
ಮಕ್ಕಳಿಲ್ಲದ ದಂಪತಿಗೆ ಬಾಡಿಗೆ ತಾಯ್ತನದ ಮುಖಾಂತರ ಮಕ್ಕಳನ್ನು ಕೊಡುವುದಾಗಿ ನಂಬಿಕೆ ನೀಡಿ ಅವರ ಬಳಿ ಭರಪೂರ ಹಣ ಪಡೆದು, ನಂತರ ಬಾಂಬೆಯಿಂದ ಮಕ್ಕಳನ್ನು ಕಳ್ಳ ಸಾಗಣೆ ಮಾಡಿ ಬಾಡಿಗೆ ತಾಯಿಗೆ ಹುಟ್ಟಿದ ಮಗುವೆಂದು ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ 2021ರಲ್ಲಿ ಬಸವನಗುಡಿ ಮಹಿಳಾ ಠಾಣೆ ಪೊಲೀಸರು, ಹೊಂಗಸಂದ್ರದ ರಂಜನಾ ದೇವಿದಾಸ್, ವಿಲ್ಸನ್ ಗಾರ್ಡನ್‌ನ ದೇವಿ ಷಣ್ಮುಗಂ, ಧನಲಕ್ಷ್ಮಿ, ಮಹೇಶ್, ಜನಾರ್ಧನನ್ ಎಂಬುವವರನ್ನು ಬಂಧಿಸಿದ್ದರು. ಈ ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಇದೀಗ ಪ್ರಕರಣ ಪ್ರಮುಖ ಆರೋಪಿ ವಕೀಲೆ ಮಹಿಳೆಯೋರ್ವಳನ್ನು ಬಂಧಿಸಿದ್ದಾರೆ.
ಕುರಬರಹಳ್ಳಿ ನಿವಾಸಿ ಕೆ.ಪಿ.ಭಾನುಮತಿ (41) ಬಂಧಿತ ವಕೀಲೆ. ಬಸವನಗುಡಿ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭಾನುಮತಿ ವೃತ್ತಿಯಲ್ಲಿ ವಕೀಲೆಯಾಗಿದ್ದು, ವಿಚ್ಛೇದನ ಹಾಗೂ ಆಸ್ತಿ ತಕರಾರು ಅರ್ಜಿಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸುತ್ತಿದ್ದಳು. ಮಕ್ಕಳಿಲ್ಲದ ದಂಪತಿ ಬಳಿ ಬಾಡಿಗೆ ತಾಯ್ತನದ ಬಗ್ಗೆ ವಿವರಿಸುತ್ತಿದ್ದಳು. ನಂತರ ತಾನೇ ಜವಾಬ್ದಾರಿ ವಹಿಸಿಕೊಂಡು ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದಂತೆ ದಂಪತಿಯನ್ನು ನಂಬಿಸುತ್ತಿದ್ದಳು. ಬಳಿಕ ಈ ಹಿಂದೆ ಬಂಧನಕ್ಕೆ ಒಳಗಾಗಿರುವ ಆರೋಪಿಗಳ ಮುಖಾಂತರ ಕಳ್ಳಸಾಗಣೆ ಮಾಡಿಕೊಂಡು ಬಳಿಕ ಆ ಮಗುವನ್ನು ಬಾಡಿಗೆ ತಾಯಿಗೆ ಹುಟ್ಟಿದ ಮಗು ಎಂದು ಆ ದಂಪತಿಗೆ ನೀಡುತ್ತಿದ್ದಳು. ಬಾಡಿಗೆ ತಾಯಿಂದ ಮಗು ಪಡೆಯಲು .3 ಲಕ್ಷದಿಂದ .3.50 ಲಕ್ಷ ಪಡೆಯುತ್ತಿದ್ದಳು. ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.