ಬೆಳ್ತಂಗಡಿ : ಆದಿವಾಸಿ ಮಹಿಳೆಯೋರ್ವಳ ಮೇಲೆ ಹಲ್ಲೆ ಪ್ರಕರಣ ; 9 ಜನರ ವಿರುದ್ಧ ಎಫ್ ಐ ಆರ್ ದಾಖಲು!
ಮಂಗಳೂರು : ಬೆಳ್ತಂಗಡಿಯಲ್ಲಿ ಆದಿವಾಸಿ
ಮಹಿಳೆಯೋರ್ವಳನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಆರೋಪದಡಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಗುರಿಪಳ್ಳ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಜಾಗದ ತಕರಾರಿನ ಹಿನ್ನೆಲೆಯಲ್ಲಿ ತಂಡದಿಂದ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. ಬಟ್ಟೆ ಹರಿದು ಹಾಕಿ ಅರೆಬೆತ್ತಲೆಗೊಳಿಸಿ ಗಂಭೀರ ಹಲ್ಲೆ ನಡೆಸಿದ ಆರೋಪ ವ್ಯಕ್ತವಾಗಿದ್ದು, ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಸುಗುಣ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಎಂಬವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆರೋಪಿಗಳ ಮೇಲೆ ಐಪಿಸಿ 143, 147, 148, 323, 324, 504, 354, 354(B), 506, 149 ಅಡಿ ಪ್ರಕರಣ ದಾಖಲಾಗಿದೆ. ಮಹಿಳೆಗೆ ಅರೆಬೆತ್ತಲೆ ಮಾಡಿ ಹಲ್ಲೆ ನಡೆಸಿದ ವಿಡಿಯೋ ಮಾಡಿದ ಬಗ್ಗೆಯೂ ದೂರು ನೀಡಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿವರ :
94ಸಿ ಅರ್ಜಿಯ ಅಳತೆಗೆಂದು ಅಧಿಕಾರಿಗಳು ಬಂದಿದ್ದರು. ಈ ಸಂದರ್ಭ ಜಾಗದ ಬಗ್ಗೆ ಇನ್ನೊಂದು ತಂಡ ತಕರಾರು ತೆಗೆದಿದೆ. ಇದರಿಂದಾಗಿ ಅಳತೆಗೆ ಬಂದವರು ಸಾಧ್ಯವಿಲ್ಲ ಎಂದು ಬಿಟ್ಟು ಹೋಗಿದ್ದಾರೆ. ಅಧಿಕಾರಿಗಳು ತೆರಳಿದ ಬಳಿಕ ಹಲ್ಲೆ ನಡೆಸಲಾಗಿದೆ ಎಂದು ದೂರಿದ್ದಾರೆ.
ಮಹಿಳೆಯರೂ ಇದ್ದ ತಂಡ ಮೊದಲು ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಅಕ್ಕನ ಮೇಲೆ ಹಲ್ಲೆ ನಡೆಸಿದ್ದು, ಇದನ್ನು ನೋಡಿ ಅಕ್ಕನ ರಕ್ಷಣೆಗೆ ತೆರಳಿದ ತಂಗಿಯ ಮೇಲೆ ಹಲ್ಲೆ ಮಾಡಿದ್ದು, ಆಕೆಯ ಬಟ್ಟೆಗಳನ್ನು ಸಂಪೂರ್ಣವಾಗಿ ಹರಿದುಹಾಕಿದ್ದಾರೆ. ಅಲ್ಲದೇ ಅರೆಬೆತ್ತಲೆಯಾಗಿದ್ದ ಮಹಿಳೆಯ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆಯ ತಾಯಿಯ ಮೇಲೂ ಇವರು ಹಲ್ಲೆ ನಡೆಸಿದ ಆರೋಪ ಕೂಡಾ ಇದೆ. ದುಷ್ಕರ್ಮಿಗಳ ತಂಡ ಅಲ್ಲಿಂದ ತೆರಳಿದ ಬಳಿಕವಷ್ಟೇ ಈ ಮಹಿಳೆಯರಿಗೆ ಮನೆಗೆ ಹೋಗಲು ಸಾಧ್ಯವಾಯಿತು ಎಂದು ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.