ಇಳಿ ವಯಸ್ಸಿನಲ್ಲಿ ಭಿಕ್ಷೆ ಬೇಡಿದ ಒಂದು ಲಕ್ಷ ರೂಪಾಯಿ ಪೊಳಲಿ ದೇವಿಯ ಅನ್ನದಾನಕ್ಕೆ!! ಸಮಾಜ ನೀಡಿದ್ದನ್ನು ಸಮಾಜಕ್ಕೇ ಅರ್ಪಿಸಿದ ಮಹಾತಾಯಿ
ಆಕೆ ಇಳಿವಯಸ್ಸಿನ ಮಾಲಾಧಾರಿ ಬಡಜೀವ. ಆದರೆ ಆಕೆಯ ಹೃದಯಶ್ರೀಮಂತಿಕೆ ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ಇಡೀ ರಾಜ್ಯವೇ ಒಮ್ಮೆ ಆಕೆಯತ್ತ ಕಣ್ಣೆತ್ತಿ ನೋಡುವುದಲ್ಲದೆ ಕೈ ಎತ್ತಿ ಮುಗಿಯುವಂತೆ ಮಾಡಿದೆ. ಅಷ್ಟಕ್ಕೂ ಆ ಮಹಾತಾಯಿ ಮಾಡಿದ ಮಹಾಕಾರ್ಯ ಏನೆಂಬುವುದನ್ನು ಈ ವರದಿ ಹೇಳುತ್ತದೆ.
ಪ್ರತೀ ನಿತ್ಯವೂ ತಾನು ಭಿಕ್ಷೆ ಬೇಡಿ ಕೂಡಿಟ್ಟ ಹಣದಲ್ಲಿ ಒಂದು ಲಕ್ಷ ರೂಪಾಯಿ ಮೊತ್ತವನ್ನು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ದೇವಾಲಯದ ಅನ್ನದಾನಕ್ಕೆ ದೇಣಿಗೆ ನೀಡಿದ್ದು ಸದ್ಯ ಇಡೀ ಜಿಲ್ಲೆಯಲ್ಲೇ ಮೆಚ್ಚುಗೆಗೆ ಪಾತ್ರವಾಗಿದೆ.ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಕಂಚಿಗೋಡು ನಿವಾಸಿಯಾದ ಅಶ್ವತಮ್ಮ ಅವರೇ ಈ ಪುಣ್ಯ ಕಾರ್ಯ ಮಾಡಿದ ಮಹಾತಾಯಿ. ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನುತ ಕುಳಿತರೆ ಎಲ್ಲವೂ ಅಸಾಧ್ಯ ಎನ್ನುವುದನ್ನು ಈ ತಾಯಿ ಸಾಧಿಸಿ ತೋರಿಸಿದ್ದಾರೆ.
ಪ್ರತೀ ನಿತ್ಯ ಭಿಕ್ಷಾಟನೆ ಮಾಡಿದ ಅಲ್ಪ ಸ್ವಲ್ಪ ಹಣದಲ್ಲಿ ತನ್ನ ಕುಟುಂಬ ಸದಸ್ಯರ ಖಾತೆಗೆ, ತನ್ನ ಪಿಗ್ಮಿ ಖಾತೆಗೆ ಜಮೆ ಮಾಡಿ ಇಂತಿಷ್ಟು ಮೊತ್ತ ಆದ ಕೂಡಲೇ ಈ ರೀತಿಯ ದೇಣಿಗೂ ನೀಡುವುದು ಅಶ್ವತಮ್ಮನ ಹವ್ಯಾಸವಾಗಿಬಿಟ್ಟಿದೆಯಂತೆ.ಈ ವರೆಗೂ ಸುಮಾರು ಆರು ಲಕ್ಷಕ್ಕೂ ಅಧಿಕ ಮೊತ್ತದ ದೇಣಿಗೆ ನೀಡಿದ್ದು, ಪಂಪೆ, ಎರಿಮಲೆಯಲ್ಲೂ ಅನ್ನದಾನಕ್ಕೆ ಸಹಕಾರ ನೀಡಿದ್ದಾರೆ.
ಒಟ್ಟಾರೆಯಾಗಿ ಸುಮಾರು 18 ವರ್ಷಗಳಿಂದ ಭಿಕ್ಷಾಟನೆ ನಡೆಸುತ್ತಿರುವ ಅಶ್ವತಮ್ಮ ಶಬರಿಮಲೆ, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಹಲವು ದೇವಾಲಯ, ಮಂದಿರಗಳಿಗೆ ತಾನು ಭಿಕ್ಷೆ ಬೇಡಿದ ಹಣವನ್ನು ದೇಣಿಗೆ ನೀಡಿದ್ದು, ಸಾಮಾಜ ನೀಡಿದ ಹಣ ತನ್ನ ಸ್ವಾರ್ಥಕ್ಕೆ ಬಳಸದೆ, ದೇಣಿಗೆ ರೂಪದಲ್ಲಿ ಸಮಾಜಕ್ಕೆ ಹಿಂದಿರುಗಿಸುತ್ತಿರುವುದು ಈಕೆಯ ಮಹಾತ್ಕಾರ್ಯ.
?ದೀಪಕ್ ಹೊಸ್ಮಠ