ಬಿಂದಿ ಹಾಕಿಕೊಳ್ಳದೆ ಜಾಹೀರಾತಿನಲ್ಲಿ ಕಾಣಿಸಿಕೊಂಡು ಕರೀನಾ ಕಪೂರ್ !! | ಹಿಂದೂ ವಿರೋಧಿ ಜಾಹೀರಾತು ಎಂದು ಮಲಬಾರ್ ಗೋಲ್ಡ್ ಬಹಿಷ್ಕಾರಕ್ಕೆ ಆಗ್ರಹ
ವ್ಯಾಪಾರಕ್ಕೆ ಜಾಹೀರಾತು ತುಂಬಾನೇ ಮುಖ್ಯವಾಗಿರುತ್ತದೆ. ಅನೇಕ ಬ್ರಾಂಡ್ ಗಳು ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಜಾಹೀರಾತುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತವೆ. ಅಂತೆಯೇ ಅನೇಕ ಬ್ರಾಂಡ್‌ಗಳು ತಮ್ಮ ಜಾಹೀರಾತಿಗೆ ಸಂಬಂಧಿಸಿದಂತೆ ಆಗಾಗ್ಗೆ ವಿವಾದಕ್ಕೀಡಾಗುತ್ತವೆ. ಹಾಗೆಯೇ ಇದೀಗ ಮಲಬಾರ್ ಗೋಲ್ಡ್ ಜಾಹೀರಾತು ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ.
ಅಕ್ಷಯ ತೃತೀಯಕ್ಕಾಗಿ ರೂಪಿಸಿರುವ ಮಲಬಾರ್ ಗೋಲ್ಡ್ ಹೊಸ ಜಾಹೀರಾತಿಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ #NobindiNoBusiness ಮತ್ತು #BoycottMalabarGold ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿವೆ. ಈ ಜಾಹೀರಾತಿನಿಂದಾಗಿ ಟ್ವಿಟರ್ ಬಳಕೆದಾರರು ಬಾಲಿವುಡ್ ನಟಿ ಕರೀನಾ ಕಪೂರ್ ಅವರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ.
ಏನಿದು ಮಲಬಾರ್ ಗೋಲ್ಡ್ ಜಾಹೀರಾತು ವಿವಾದ?
ಮಲಬಾರ್ ಗೋಲ್ಡ್ ಅಕ್ಷಯ ತೃತೀಯಕ್ಕೆ ಸಂಬಂಧಿಸಿದಂತೆ ಆಭರಣಗಳ ಹೊಸ ಜಾಹೀರಾತನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಆದರೆ, ಕರೀನಾ ಈ ಜಾಹೀರಾತಿನಲ್ಲಿ ಬಿಂದಿ ಹಾಕಿಲ್ಲ ಎಂದು ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ವ್ಯಾಪಕ ಟೀಕಿಗೆ ಗುರಿಯಾಗಿದೆ. ಅನೇಕರು ಮಲಬಾರ್ ಗೋಲ್ಡ್ ಜಾಹೀರಾತನ್ನು ಟೀಕಿಸಿದ್ದು, ಇದು ಹಿಂದೂ ಸಂಪ್ರದಾಯ ಮತ್ತು ಹಬ್ಬಗಳನ್ನು ಕಡೆಗಣಿಸುವ ಪ್ರಯತ್ನವೆಂದು ಕಿಡಿಕಾರಿದ್ದಾರೆ. ಇದಲ್ಲದೇ ಮಲಬಾರ್ ಚಿನ್ನವನ್ನು ಬಹಿಷ್ಕರಿಸುವಂತೆ ಆಗ್ರಹಿಸಿದ್ದಾರೆ. ಈ ಜಾಹೀರಾತಿನಲ್ಲಿ ಕರೀನಾ ಏಕೆ ಬಿಂದಿಯನ್ನು ಧರಿಸಿಲ್ಲ? ಇದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ಷಯ ತೃತೀಯದಂದು ಹಿಂದೂ ಸಮುದಾಯದವರು ಚಿನ್ನ ಖರೀದಿಗೆ ಮಂಗಳಕರವೆಂದು ಪರಿಗಣಿಸಿದ್ದಾರೆ. ಈ ಜಾಹೀರಾತಿನಲ್ಲಿ ಕರೀನಾ ಗುಲಾಬಿ ಬಣ್ಣದ ಲೆಹಂಗಾ ಧರಿಸಿ, ವಿಸ್ತಾರವಾದ ಡೈಮಂಡ್ ನೆಕ್‌ಪೀಸ್, ಕಿವಿಯೋಲೆಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಹಣೆ ಮೇಲೆ ಬಿಂದಿ ಮಾತ್ರ ಇಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜಾಹೀರಾತಿನ ವೀಡಿಯೋ ಕಾಣಿಸಿಕೊಂಡ ನಂತರ ಟ್ವಿಟರ್ ಬಳಕೆದಾರರು ಮಲಬಾರ್ ಗೋಲ್ಡ್ ಅನ್ನು ಬಹಿಷ್ಕರಿಸಲು ಒತ್ತಾಯಿಸಿದ್ದಾರೆ. #Boycott_MalabarGold ಮತ್ತು #No_Bindi_No_Business ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟ್ವೀಟ್ ಮಾಡಲು ಪ್ರಾರಂಭಿಸಿದ್ದಾರೆ. ‘ಮಲಬಾರ್ ಗೋಲ್ಡ್‌ನ ಹೊಸ ಜಾಹೀರಾತು ಹಿಂದೂ ಹಬ್ಬಗಳನ್ನು ಗೇಲಿ ಮಾಡುವುದಕ್ಕೆ ಹೊಸ ಉದಾಹರಣೆಯಾಗಿದೆ’ ಎಂದು ಕಿಡಿಕಾರಿದ್ದಾರೆ.