ಉಜಿರೆ: ಸರ್ಕಾರಿ ಜಮೀನಿನಲ್ಲಿ ನಿವೇಶನ ನೀಡುವ ವಿಚಾರದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಬಟ್ಟೆ ಎಳೆದು ಮಾನಹಾನಿಗೆ ಯತ್ನ !! | ಬೆಳ್ತಂಗಡಿ ಠಾಣೆಯಲ್ಲಿ 9 ಮಂದಿಯ ವಿರುದ್ಧ ದೂರು ದಾಖಲು
ಸರ್ಕಾರಿ ಜಮೀನಿನಲ್ಲಿ ನಿವೇಶನ ನೀಡುವ ವಿಚಾರದಲ್ಲಿ ಮಹಿಳೆಯ ಮೇಲೆ ತಂಡವೊಂದು ಹಲ್ಲೆ ನಡೆಸಿದ್ದಲ್ಲದೆ, ಸಾರ್ವಜನಿಕವಾಗಿ ಬಟ್ಟೆ ಎಳೆದು ಮಾನಹಾನಿಗೆ ಮುಂದಾದ ಘಟನೆ ಉಜಿರೆ ಗ್ರಾಮದ ಅಳಕೆ ಎಂಬಲ್ಲಿ ನಡೆದಿದೆ.
ಅಳಕೆ ನಿವಾಸಿ ಸುರೇಖಾ ಅವರ ಮೇಲೆ ಹಲ್ಲೆ ನಡೆದಿದೆ. ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಹಲ್ಲೆ ನಡೆಸಿದ ಆರೋಪಿಗಳು.
ಆರೋಪಿಗಳು ಎ.19 ರಂದು ಸುರೇಖಾರವರ ಅಕ್ಕ ಜ್ಯೋತಿ ಅವರು ಮನೆಯ ಹತ್ತಿರದ ರಸ್ತೆಯಲ್ಲಿ ನಿಂತಿದ್ದ ವೇಳೆ ಅವರ ಮೇಲೆ ಹಲ್ಲೆ ಮಾಡಿ ಬಟ್ಟೆ ಎಳೆಯಲು ಮುಂದಾಗಿದ್ದಾರೆ. ಇದನ್ನು ತಡೆಯಲು ಹೋದ ಸುರೇಖಾ ಅವರಿಗೂ ಹಲ್ಲೆ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಧರಿಸಿದ್ದ ಬಟ್ಟೆಯನ್ನು ಹರಿದು ಮಾನಹಾನಿ ಮಾಡಲು ಮುಂದಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ತಡೆಯಲು ಹೋದ ಸುರೇಖಾ ರವರ ತಾಯಿ ಲೀಲಾ ಎಂಬವರಿಗೆ ಇಬ್ಬರು ದೊಣ್ಣೆಯಿಂದ ಹಲ್ಲೆ ಮಾಡಿದ್ದಲ್ಲದೆ, ಇದನ್ನು ತಡೆಯಲು ಹೋದ ಯತೀಶ್ ಎಂಬವರಿಗೂ ಕೂಡ ಹೊಡೆದಿದ್ದಾರೆ. ಅಲ್ಲದೆ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.
ಈ ಬಗ್ಗೆ ಸುರೇಖಾ ಅವರು ಎ.21 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, 9 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.