ಸುಳ್ಯ: ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು ಇನ್ನಿಲ್ಲ

ಸುಳ್ಯದ ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು (95) ನಿನ್ನೆ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

 

ಅಧ್ಯಾಪಕ, ಕೃಷಿಕ, ಕವಿ, ವಿದ್ವಾಂಸರಾಗಿ ಹೆಸರು ಮಾಡಿದ್ದ ತಮ್ಮಯ್ಯ ಗೌಡ ಮುಡೂರವರು ಕನ್ನಡ, ತುಳು, ಅರೆಭಾಷೆ ಈ ಮೂರು ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಲ್ಲದೆ, ‘ಹೃದಯರೂಪಕ’ ಎಂಬ ಆಂಗ್ಲ ನಾಟಕದ ರೂಪಾಂತರ ಕೃತಿಯನ್ನೂ ಪ್ರಕಟಿಸಿ ಅತ್ಯಂತ ಜನಪ್ರಿಯರಾಗಿದ್ದರು.

ಟಿ.ಜಿ.ಮುಡೂರು ಅವರು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಲ್ಲಿ ಸುಳ್ಯ ತಾಲೂಕಿನ ಪ್ರತಿನಿಧಿಯಾಗಿ 15 ವರ್ಷಗಳ ಕಾಲ ನಿರ್ವಹಿಸಿದ್ದಲ್ಲದೆ, ಸುಳ್ಯ ಘಟಕವಾದಾಗ ತಾಲೂಕು ಕ.ಸಾ.ಪ. ಅಧ್ಯಕ್ಷರಾಗಿ 3 ವರ್ಷ ಕಾರ್ಯ ನಿರ್ವಹಿಸಿರುತ್ತಾರೆ. ಸುಬ್ರಹ್ಮಣ್ಯ, ಪಂಜ, ಅಡ್ಕಾರುಗಳಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನಗಳು ಇವರ ನೇತೃತ್ವದಲ್ಲಿ ಸಂಘಟಿಸಲ್ಪಟ್ಟಿತ್ತು. ಸುಳ್ಯದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವೂ ಇವರ ನೇತೃತ್ವದಲ್ಲಿ ನಡೆದಿತ್ತು.

1997 ರಲ್ಲಿ ಅರಂತೋಡುನಲ್ಲಿ ಜರಗಿದ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ಸಂಸ್ಕೃತಿ ದಿಬ್ಬಣದಲ್ಲಿ ಸುಳ್ಯದಲ್ಲಿ ಇವರನ್ನು ಸನ್ಮಾನಿಸುವುದರ ಜೊತೆಗೆ ಟಿ.ಜಿ.ಮುಡೂರು ಬದುಕು ಬರಹಗಳ ಅಭಿನಂದನಾ ಗ್ರಂಥ- ನಂದಾದೀಪವನ್ನು ಅರ್ಪಿಸಿ ಅದ್ಧೂರಿಯಾಗಿ ಪಂಜದಲ್ಲಿ ಸನ್ಮಾನಿಸಿರುವುದು ಇವರ ಜನಪ್ರಿಯತೆಗೆ ಸಾಕ್ಷಿ.

ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳ ಜೊತೆ ನಿಕಟ ಸಂಪರ್ಕವನ್ನಿರಿಸಿಕೊಂಡು ಸಕ್ರಿಯವಾಗಿ ತೊಡಗಿಸಿಕೊಂಡು ಸಂತೃಪ್ತ ಜೀವನ ನಡೆಸಿದ ಕ್ರಿಯಾಶೀಲ ವ್ಯಕ್ತಿತ್ವದ ಶ್ರೀ ಮುಡೂರುರವರು ಸುಳ್ಯ ಕಂಡ ಅಪರೂಪದ ಸಾಹಿತಿಯಾಗಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave A Reply

Your email address will not be published.