ಮಂಗಳೂರು : ಹಿಮ್ಮುಖವಾಗಿ ಚಲಿಸಿದ ಕಂಟೈನರ್ ಲಾರಿ ; ಸೆಕ್ಯೂರಿಟಿ ಗಾರ್ಡ್, ದಂಪತಿ ಪವಾಡಸದೃಶ ಪಾರು!

ಮಂಗಳೂರು : ನಿಲ್ಲಿಸಿದ ಕಂಟೈನರ್
ಲಾರಿಯೊಂದು ಒಂದು ಕಿ.ಮೀಗೂ ಅಧಿಕ ದೂರ ಹಿಮ್ಮುಖ ಚಲಿಸಿ, ಟೋಲ್ ಗೇಟ್ ಗೆ ಗುದ್ದಿ ಹಾನಿಗೊಳಿಸಿದ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್ ಲಾರಿ ಡಿಕ್ಕಿ ಹೊಡೆಯುವುದರಿಂದ ಸೆಕ್ಯುರಿಟಿ ಗಾರ್ಡ್ ಹಾಗೂ ದಂಪತಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಈ ಘಟನೆ ಎ 19 ರಂದು ರಾತ್ರಿ ಉಳ್ಳಾಲದ ತಲಪಾಡಿ ಟೋಲ್‌ಗೇಟ್ ನಲ್ಲಿ ನಡೆದಿದೆ.

ದೆಹಲಿಯಿಂದ ಕೊಚ್ಚಿಗೆ ಫ್ರಿಡ್ಜ್ ಸಾಗಣೆ ಮಾಡುತ್ತಿದ್ದ ಗಣಪತಿ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ ಲಾರಿ ಅಪಘಾತಕ್ಕೆ ಕಾರಣವಾದ ಕಂಟೈನರ್ ಲಾರಿ. ಚಾಲಕ ಜೈವೀರ್ ಸಿಂಗ್ ತಲಪಾಡಿ ಟೋಲ್ ದಾಟಿ ಚಹಾ ಕುಡಿಯಲು ಕಂಟೈನರ್ ಲಾರಿಯನ್ನು ಹೆದ್ದಾರಿ ಬಳಿ ನಿಲ್ಲಿಸಿದ್ದರು.

ಅವರು ಹೊಟೇಲ್ ನಲ್ಲಿ ಚಹಾ ಕುಡಿಯುತ್ತಿದ್ದಂತೆ ಲಾರಿ ತನ್ನಿಂದ ತಾನೇ ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ. ಈ ವೇಳೆ ಅದು ರಿಕ್ಷಾ ಹಾಗೂ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿ ಚಲಿಸಿ ಟೋಲ್‌ಗೇಟ್‌ನಲ್ಲಿರುವ ಸೆನ್ಸರ್ ಕಂಬ, ಸೆಕ್ಯುರಿಟಿ ಚೇರ್, ತಡೆಗಲ್ಲಿಗೆ ಗುದ್ದಿ ನಿಂತಿದೆ.

ಈ ನಡುವೆ ಟೋಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯುರಿಟಿ ಸತೀಶ್ ನಾರ್ಲಪಡೀಲು, ಅಶೋಕ್ ಹಾಗೂ ಕೇರಳ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ದಂಪತಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಹ್ಯಾಂಡ್ ಬ್ರೇಕ್ ಕೈಕೊಟ್ಟ ಪರಿಣಾಮ ಲಾರಿ ಹಿಂಬದಿ ಚಲಿಸಿರುವುದಾಗಿ ಚಾಲಕ ತಿಳಿಸಿದ್ದಾರೆ. ಘಟನೆಯಿಂದ ಸುಮಾರು ಒಂದು ಲಕ್ಷದಷ್ಟು ನಷ್ಟ ಉಂಟಾಗಿದೆ.

ರಾತ್ರಿ ಸುಮಾರು 9.30ರಂದು ಈ ಘಟನೆ ನಡೆದಿದ್ದು, ರಂಜಾನ್ ಮಾಸವಾಗಿದ್ದ ಹಿನ್ನೆಲೆಯಲ್ಲಿ ಕೇರಳ ಕಡೆಯಿಂದ ಬರುವ ಹಾಗೂ ಹೋಗುವ ವಾಹನಗಳು ಇರಲಿಲ್ಲ. ಇಷ್ಟು ಮಾತ್ರವಲ್ಲದೇ ಜನಸಂಚಾರವೂ ವಿರಳವಾಗಿತ್ತು. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ ಎಂದು ಟೋಲ್ ಪಿ.ಆರ್.ಒ ಭಾಸ್ಕರ್ ತಲಪಾಡಿ ಪ್ರತಿಕ್ರಿಯಿಸಿದ್ದಾರೆ.

Leave A Reply

Your email address will not be published.