ಸುದ್ದಿ ಫ್ರಂ ಸುಳ್ಯ | ಸಮಸ್ಯೆ ಹೇಳಲು ಡಿ.ಕೆ.ಶಿ ಗೆ ಕರೆ ಮಾಡಿದ್ದ ಬೆಳ್ಳಾರೆಯ ವ್ಯಕ್ತಿಗೆ ಎರಡು ವರ್ಷ ಜೈಲು!!
ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಫೋನಾಯಿಸಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿರುವ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಗಿರಿಧರ್ ರೈ ಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದ್ದು, ಸದ್ಯ ನ್ಯಾಯಾಲಯದ ತೀರ್ಪಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಡಪಾಯಿಗೆ ಶಿಕ್ಷೆಯಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಘಟನೆ ವಿವರ:2016 ರಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರಿಗೆ ತಮ್ಮೂರಿನ ವಿದ್ಯುತ್ ಸಮಸ್ಯೆಯ ಬಗ್ಗೆ ತಿಳಿಸಲೆಂದು ಫೆ.28ರ ಇಳಿಸಂಜೆಯ ಹೊತ್ತಿನಲ್ಲಿ ಬೆಳ್ಳಾರೆಯ ಗಿರಿಧರ್ ರೈ ಕರೆಮಾಡಿದ್ದರು. ಈ ವೇಳೆ ಕರೆ ಸ್ವೀಕರಿಸಿ ಮಾತನಾಡಿದ ಡಿಕೆಶಿ ಸರಿಯಾಗಿ ಸ್ಪಂದಿಸಲಿಲ್ಲ ಎನ್ನುವ ಕಾರಣಕ್ಕೆ ಗಿರಿಧರ್ ರೈ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.ಈ ಬಗ್ಗೆ ಇಬ್ಬರ ನಡುವೆಯೂ ಮಾತಿಗೆ ಮಾತು ಬೆಳೆದಿದ್ದು, ಫೋನ್ ಕರೆಯಲ್ಲೇ ಕೈ ಮಿಲಾಯಿಸುವ ಮಟ್ಟಿಗೆ ಬೆಳೆದಿತ್ತಂತೆ.
ಇದಾಗಿ ಕೆಲ ಹೊತ್ತಿನ ಬಳಿಕ ಗಿರಿಧರ್ ರೈ ಮನೆಗೆ ಸುಳ್ಯ ಠಾಣಾಧಿಕಾರಿ ಸಹಿತ ಪೇದೆಗಳು ಆಗಮಿಸಿದ್ದು, ರಾತ್ರಿಯಾಗಿದ್ದರಿಂದ ಮನೆಯ ಬಾಗಿಲು ಹಾಕಿತ್ತು.ಪೊಲೀಸರು ಬಾಗಿಲು ತೆಗೆಯಲು ಒತ್ತಡ ಹೇರಿದ್ದು, ಗಿರಿಧರ್ ರೈ ಬಾಗಿಲು ತೆರೆಯಲು ನಿರಾಕರಿಸಿದಾಗ ಮನೆಯ ಹೆಂಚು ಸರಿಸಿ ಪೊಲೀಸರು ಒಳನ್ನುಗ್ಗಿದ್ದರು. ಬಳಿಕ ಗಿರಿಧರ್ ರೈ ರನ್ನು ದರದರನೇ ಎಳೆತಂದು ಜೀಪಿನಲ್ಲಿ ಕುಳ್ಳಿರಿಸಿ ಠಾಣೆಗೆ ಕರೆತಂದು ರಾತ್ರಿ ಇಡೀ ರಾತ್ರಿ ಚಿತ್ರಹಿಂಸೆ ನೀಡಿದ್ದರು ಎಂದು ದೂರಲಾಗಿತ್ತು.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದ್ದು, ಸಚಿವರ ನಡೆಯನ್ನು ಹಲವರು ವಿರೋಧಿಸಿದ್ದರು. ಓರ್ವ ರಾಜಕಾರಣಿ ಪೊಲೀಸರನ್ನು ತನ್ನ ಒತ್ತೆಯಾಳುಗಳಂತೆ ಪರಿಗಣಿಸಿ, ಸಮಸ್ಯೆಯನ್ನು ಹೇಳಿಕೊಂಡಾತನ ಮೇಲೆಯೇ ಪೊಲೀಸ್ ಪ್ರಭಾವ ಮೆರೆಸಿದ ಸುದ್ದಿ ಕೆಲ ಹೊತ್ತಿನಲ್ಲೇ ರಾಜ್ಯ, ರಾಷ್ಟ್ರ ಮಟ್ಟಕ್ಕೂ ತಲುಪಿತ್ತು.ಇದಾಗಿ ಕೆಲ ಹೊತ್ತಿನಲ್ಲೇ ಸುಳ್ಯ ಪೊಲೀಸ್ ಠಾಣೆಯಲ್ಲಿ ಸಚಿವರ ಕರ್ತವ್ಯಕ್ಕೆ ಅಡ್ಡಿ, ನಿಂದನೆ, ಜೀವ ಬೆದರಿಕೆ, ಮಾನಹಾನಿ ಹೀಗೆ ನಾಲ್ಕು ಕೇಸುಗಳನ್ನು ಗಿರಿಧರ್ ರೈ ಅವರ ಮೇಲೆ ಜಡಿಯಲಾಗಿತ್ತು. ಈ ಬಗ್ಗೆ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿತ್ತು.
ಈ ಬಗ್ಗೆ ಸಾಕ್ಷಿ ನುಡಿಯುವಂತೆ ಸುಳ್ಯ ನ್ಯಾಯಾಲಯವು ಡಿಕೆಶಿ ಗೆ ಮೂರು ಬಾರಿ ಸಮನ್ಸ್ ಜಾರಿಗೊಳಿಸಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ವಾರಂಟ್ ಹೊರಡಿಸಿತ್ತು. ಅಂತೆಯೇ 2021ರ ಸೆ.29ರಂದು ಡಿಕೆಶಿ ಸುಳ್ಯಕ್ಕೆ ಆಗಮಿಸಿ ನ್ಯಾಯಾಧೀಶರ ಮುಂದೆ ಹಾಜರಾಗಿ ಸಾಕ್ಷಿ ನುಡಿದಿದ್ದು, ಇದೀಗ ಆರೋಪಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸುವ ಮೂಲಕ ಕೋರ್ಟ್ ತೀರ್ಪು ನೀಡಿದೆ.
2016 ರಲ್ಲಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಕರಣಕ್ಕೆ ಆರು ವರ್ಷಗಳ ಬಳಿಕ ತೀರ್ಪು ಬಂದಿದ್ದು, ಸಮಸ್ಯೆ ಹೇಳಿದ್ದ ಅಮಾಯಕನ ಮೇಲೆಯೇ ಕ್ರಮ ಕೈಗೊಂಡಿರುವುದು ಕೆಲವರಲ್ಲಿ ಬೇಸರ ಮೂಡಿಸಿದೆ. ಅಂತೂ ಕೋರ್ಟ್ ಕಲಾಪಕ್ಕೆ ನಾಲ್ಕು ಬಾರಿ ತಪ್ಪಿಸಿಕೊಂಡು, ವಾರಂಟ್ ಬಳಿಕ ಆಗಮಿಸಿದರೂ ಡಿ.ಕೆ.ಶಿಯೇ ಗೆದ್ದಂತಾಗಿದೆ.