ಮಂಗಳೂರು ವಿಷಾನಿಲ ದುರಂತದ ಕಂಪ್ಲೀಟ್ ಅಪ್ಡೇಟ್ !! ಕಂಪೆನಿಯ ಬೇಜವಾಬ್ದಾರಿಗೆ 5 ಜನರ ದುರಂತ ಅಂತ್ಯ!ಮ್ಯಾನೇಜರ್ ಸಹಿತ ಐವರು ಪೊಲೀಸರ ವಶಕ್ಕೆ
ಮಂಗಳೂರು: ಇಲ್ಲಿನ ಹೊರವಲಯದ ಎಸ್‌ಇಝಡ್ (ವಿಶೇಷ ಆರ್ಥಿಕ ವಲಯ) ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ವಿಷಾನಿಲ ಸೋರಿಕೆಯಾಗಿ ಐವರು ಮೃತಪಟ್ಟಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರು ಹೊರವಲಯದ ಎಸ್‌ಇಝಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನಿನ ಫ್ಯಾಕ್ಟರಿಯ ಟ್ಯಾಂಕೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿದೆ. ಭಾನುವಾರ ರಾತ್ರಿ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕನ್ನು ಶುಚಿಗೊಳಿಸಲು ಕೆಳಗಿಳಿದ ಸಂದರ್ಭದಲ್ಲಿ ಏಕಾಏಕಿ ಅಸ್ವಸ್ಥಗೊಂಡು ಬಿದ್ದಿದ್ದಾನೆ.
ಕೂಡಲೇ ಆತನನ್ನು ರಕ್ಷಿಸಲು 8 ಕಾರ್ಮಿಕರು ಹೋಗಿದ್ದಾರೆ. ಈ ವೇಳೆ ಅವರು ಕೂಡ ಅಸ್ವಸ್ಥಗೊಂಡು, ಉಸಿರಾಟದಲ್ಲಿ ಏರುಪೇರಾಗಿದೆ. ಅಸ್ವಸ್ಥಗೊಂಡವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಇಬ್ಬರು ಇಂದು ಮುಂಜಾನೆ ಸಾವಿಗೀಡಾಗಿದ್ದಾರೆ. 3 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟವರೆಲ್ಲರೂ ಪಶ್ಚಿಮ ಬಂಗಾಳ ಮೂಲದವರಾದ ಮೊಹಮ್ಮದ್ ಸಮಿಉಲ್ಲ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಆಲಿಸ್ ,ಮಿರಾಜುಲ್ ಇಸ್ಲಾಂ, ಶರಾಫತ್ ಆಲಿ ಮೃತ ದುರ್ದೈವಿಗಳು. ಹಸನ್ ಆಲಿ, ಮೊಹಮ್ಮದ್ ಕರೀಬುಲ್ಲ, ಹಫೀಜುಲ್ಲಾ ಗಂಭೀರ ಸ್ಥಿತಿಯಲ್ಲಿದ್ದಾರೆ.
ಕಂಪೆನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ರಕ್ಷಣಾತ್ಮಕ ಉಪಕರಣಗಳನ್ನು ಒದಗಿಸದೇ ನಿರ್ಲಕ್ಷ್ಯ ವಹಿಸಿರುವುದೇ ಈ ದುರ್ಘಟನೆ ನಡೆಯಲು ಕಾರಣ ಎನ್ನಲಾಗಿದೆ.
ಕಂಪನಿಯ ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್ ,ಏರಿಯಾ ಮ್ಯಾನೇಜರ್ ಕುಬೇರ್ ಗಾಡೆ,ಮತ್ತು ಅಲ್ಲಿನ ಸೂಪರ್ವೈಸರ್ ಮೊಹಮ್ಮದ್ ಅನ್ವರ್ ಅನ್ನು ಹಾಗೂ ಕಂಪನಿಯ ಕಾರ್ಮಿಕರ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಸ್ಥಳೀಯ ವ್ಯಕ್ತಿ ಫಾರೂಕ್,ಅಜಾದ್ ನಗರ ಉಳ್ಳಾಲ ಎಂಬವರನ್ನು ವಶಕ್ಕೆ ಪಡೆಯಲಾಗಿರುತ್ತದೆ.
ಮೃತಪಟ್ಟವರ ಬಗ್ಗೆ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಮೃತದೇಹಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಿ ಮೃತರ ವಾರಸುದಾರರಿಗೆ ಹಸ್ತಾಂತರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು