ಮಂಗಳೂರು : ಪಿಎಸ್ ಐ ಗೆ ಇರಿದು ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರಿನಲ್ಲಿ ಬೊಂಬೆ ಮಾರುತ್ತಿದ್ದ!!!
ಬೆಲೆಬಾಳುವ ವಾಚ್ ಕಳವು ಆರೋಪಿಯನ್ನ ಬಂಧಿಸಲು ತೆರಳಿದ್ದ ಕೊಣಾಜೆ ಪಿಎಸ್‌ಐ ಶರಣಪ್ಪ ಅವರಿಗೆ ಇರಿದು ಪರಾರಿಯಾಗಿದ್ದ ಆರೋಪಿಯೋರ್ವ ಬೆಂಗಳೂರಲ್ಲಿ ಗೊಂಬೆ ಮಾರುತ್ತಿದ್ದ. ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಲೆತ್ತೂರು, ಕಾಡುಮಠ ನಿವಾಸಿ ಮಹಮ್ಮದ್ ಸಾದಿಕ್(23) ಪಿಎಸ್‌ಐಗೆ ಇರಿದು ಪರಾರಿಯಾಗಿ ಸಿಕ್ಕಿಬಿದ್ದ ಆರೋಪಿ. ಮಂಗಳೂರಿನ ಬಂದರು ಠಾಣೆ ವ್ಯಾಪ್ತಿಯಲ್ಲಿ ಬೆಲೆ ಬಾಳುವ ವಾಚ್ ಕಳ್ಳತನ ಪ್ರಕರಣ ನಡೆದಿತ್ತು. ಕೃತ್ಯ ನಡೆಸಿದ ಆರೋಪಿ ಮಹಮ್ಮದ್ ಸಾದಿಕ್ ನಟೋರಿಯಸ್ ಆಗಿದ್ದು ಈ ಹಿಂದೆ ಕೂಡ ತನ್ನನ್ನ ಬಂಧಿಸಲು ತೆರಳಿದ್ದ ಬಂದರು ಪೊಲೀಸ್ ಠಾಣೆ ಸಿಬ್ಬಂದಿ ವಿನೋದ್ ಎಂಬವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ.
ಕಳೆದ ಮಾ.23 ರ ಬುಧವಾರ ರಾತ್ರಿ ಕಳ್ಳತನ ಆರೋಪಿ ಸಾದಿಕ್ ಕೊಣಾಜೆ ಠಾಣೆ ವ್ಯಾಪ್ತಿಯ ಅರ್ಕಾಣ ಎಂಬಲ್ಲಿನ ತನ್ನ ಪತ್ನಿ ಮನೆಯಲ್ಲಿರುವುದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಮೇರೆಗೆ ಕೊಣಾಜೆ ಪಿಎಸ್‌ಐ ಶರಣಪ್ಪ ಭಂಡಾರಿ ನೇತೃತ್ವದ ತಂಡ ಸಾದಿಕ್ ಬಂಧನಕ್ಕೆ ತೆರಳಿದ್ದ ವೇಳೆ ಪಿಎಸ್‌ಐಗೆ ಇರಿದು ಪರಾರಿಯಾಗಿದ್ದ, ಸಾದಿಕ್ ಪರಾರಿಯಾಗಲು ಸಹಕರಿಸಿದ್ದ ಆತನ ಸಹೋದರ ನಾಸಿರ್ ಎಂಬಾತನನ್ನ ಪೊಲೀಸರು ಬಂಧಿಸಿ ನಡೆಸಿದ್ದರು.
ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟಲ್ಲಿ ಸಾದಿಕ್ ಸ್ನೇಹಿತನೊಂದಿಗೆ ಆಟಿಕೆ ಗೊಂಬೆಗಳನ್ನು ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು ಮಹಮ್ಮದ್ ಸಾದಿಕ್ ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ವಿರುದ್ಧ ಕೇರಳದಲ್ಲಿ ಹಲವಾರು ಪ್ರಕರಣಗಳಿವೆಯಂತೆ.