ಮುಸ್ಲಿಮರು ಮೊದಲು ಬಿಜೆಪಿ ಪಕ್ಷವನ್ನು ವಿರೋಧಿಸುವುದನ್ನು ನಿಲ್ಲಿಸಬೇಕು !!- ಮುಸ್ಲಿಂ ಧರ್ಮಗುರು
ಬಿಜೆಪಿ ಪಕ್ಷವನ್ನು ವಿರೋಧಿಸುವುದನ್ನು ಮುಸ್ಲಿಮರು ನಿಲ್ಲಿಸಬೇಕು ಎಂದು ಅಖಿಲ ಭಾರತ ತಂಝೀಮ್ ಉಲೇಮಾ-ಎ-ಇಸ್ಲಾಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಹಾಬುದ್ದೀನ್ ರಿಜ್ವಿ ಅವರು ಕರೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಇತರ ಪರ್ಯಾಯಗಳನ್ನು ಅನ್ವೇಷಿಸಿ ಮತ್ತು ಬಿಜೆಪಿ ವಿರೋಧಿ ಟ್ಯಾಗ್ ಅನ್ನು ಕೈಬಿಡಿ ಎಂದು ಸಲಹೆ ನೀಡಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಇತ್ತೀಚೆಗಷ್ಟೇ ಮುಗಿದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ನೀಡದೆ ಮುಸ್ಲಿಂ ಸಮುದಾಯದ ಹಿರಿಯ ನಾಯಕರನ್ನು ನಿರ್ಲಕ್ಷಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಂಚೂಣಿಗೆ ಬಂದಿರುವ ಹೊಸ ಸನ್ನಿವೇಶಗಳ ಆಧಾರದ ಮೇಲೆ, ಮುಸ್ಲಿಂ ಸಮುದಾಯವು ಸಮಾಜವಾದಿ ಪಕ್ಷವನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು. ಅಖಿಲೇಶ್ ಯಾದವ್, ಮುಸ್ಲಿಮರನ್ನು ನಿರ್ಲಕ್ಷಿಸುತ್ತಿರುವುದರಿಂದ ಪರ್ಯಾಯಗಳ ಬಗ್ಗೆ ಯೋಚಿಸಬೇಕು ಎಂದು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷವು ಹಿರಿಯ ಮುಸ್ಲಿಂ ನಾಯಕರಿಗೆ ಪಕ್ಷದ ಟಿಕೆಟ್ ನೀಡಲಿಲ್ಲ. ಮುಲಾಯಂ ಸಿಂಗ್ ಯಾದವ್ ಅವರು ಮುಸ್ಲಿಮರ ಹಿತೈಷಿಯಾಗಿದ್ದರು. ಆದರೆ ಈಗ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಎಸ್ಪಿ ನಮ್ಮ ಹಿತೈಷಿ ಅಲ್ಲ ಎಂದು ರಿಜ್ವಿ ಹೇಳಿದ್ದಾರೆ. ಅದಲ್ಲದೆ ಈಗ ಮುಸ್ಲಿಮರು ಮುಸ್ಲಿಮರ ವಿರುದ್ಧವೇ ತಿರುಗಿದ್ದಾರೆ. ಹಿಂದೂಗಳು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಮಾತನಾಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ನಂತರ ಮುಸ್ಲಿಮರ ವಿರುದ್ಧ ಮುಸ್ಲಿಮರು ತಿರುಗಿ ಬಿದ್ದಿರುವುದು ಕಂಡು ಬರುತ್ತಿದೆ. ಒಬ್ಬ ಮುಸ್ಲಿಂ ಬಿಜೆಪಿ ಧ್ವಜ ಇಟ್ಟುಕೊಂಡರೆ, ಮತ್ತೊಬ್ಬ ಮುಸ್ಲಿಂ ವಿರೋಧಿಸುತ್ತಾನೆ. ಇದು ಒಂದೆರಡು ಕೊಲೆಗಳಿಗೂ ಕಾರಣವಾಗಿದೆ. ಮತ್ತೊಂದೆಡೆ ಹಿಂದೂಗಳು ಮುಸ್ಲಿಮರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎರಡು ಸಮುದಾಯಗಳ ನಡುವೆ ದ್ವೇಷ ಹೆಚ್ಚುತ್ತಿದೆ. ನಾನು ಈ ದ್ವೇಷವನ್ನು ಕೊನೆಗೊಳಿಸಬೇಕು ಎಂದು ಬಯಸುತ್ತೇನೆ. ಪರಸ್ಪರರ ವಿರುದ್ಧ ಹೋರಾಡುತ್ತಿರುವ ಮುಸ್ಲಿಮರು ಇದನ್ನು ನಿಲ್ಲಿಸಬೇಕು. ಅದಕ್ಕೆ ಪರಿಣಾಮಕಾರಿ ಮಾರ್ಗವೆಂದರೆ ಮುಸ್ಲಿಮರು ಬಿಜೆಪಿಯನ್ನು ವಿರೋಧಿಸುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.