ಸಂತೋಷ್ ಪಾಟೀಲ್ ಅನುಮಾನಾಸ್ಪದ ಸಾವಿನ ಬಗ್ಗೆ ಹೆಚ್ಚಿದ ಆಕ್ರೋಶ!! ಸಚಿವ ಈಶ್ವರಪ್ಪ ವಿರುದ್ಧ ಎಫ್ ಐ ಆರ್ -ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚನೆ
ಉಡುಪಿ ಲಾಡ್ಜ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅದಲ್ಲದೆ ಈ ಪ್ರಕರಣದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೆಸರು ಕೇಳಿಬರುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಈಶ್ವರಪ್ಪ ಮೇಲೆ ಗರಂ ಆಗಿದ್ದು, ರಾಜೀನಾಮೆ ನೀಡುವಂತೆ ಸೂಚನೆ ನೀಡಿದೆ.
ಉಡುಪಿ ನಗರ ಠಾಣೆಯಲ್ಲಿ ಮಧ್ಯರಾತ್ರಿ 2.20ರ ಸುಮಾರಿಗೆ ಎಫ್ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಎ-1 ಆರೋಪಿ ಸಚಿವ ಕೆ.ಎಸ್ ಈಶ್ವರಪ್ಪ, ಎ-2 ಈಶ್ವರಪ್ಪ ಆಪ್ತ ಬಸವರಾಜ್, ಎ-2 ಈಶ್ವರಪ್ಪ ಆಪ್ತ ರಮೇಶ್ ಆಗಿದ್ದು, ಇವರುಗಳ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ರಡಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ಸಂತೋಷ್ ಆತ್ಮಹತ್ಯೆ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಈಶ್ವರಪ್ಪ ವಿರುದ್ಧ ಸಂತೋಷ್ ಸಹೋದರ ಪ್ರಶಾಂತ್ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಸಂತೋಷ್ ಸಾವಿಗೆ ಕಮಿಷನ್ ಕಾಟವೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಸಂತೋಷ್ ಅವರು ಹಿಂಡಲಗಾ ದೇವಿ ಜಾತ್ರೆ ಕಾಮಗಾರಿ ವಹಿಸಿಕೊಂಡಿದ್ದರು. ಕಾಮಗಾರಿಯ 4 ಕೋಟಿ ಬಿಲ್ ಮಂಜೂರು ಮಾಡಲು ಸಂತೋಷ್ ಕೇಳಿದ್ದರು. ಆದರೆ ಈ ಬಿಲ್ ಮಂಜೂರು ಮಾಡಲು 40% ಕಮಿಷನ್ ಬೇಡಿಕೆಯಿಟ್ಟಿದ್ದರು. ಇದೀಗ ಕಮಿಷನ್ ಆರೋಪಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಸಂತೋಷ್ ಸಹೋದರ ಉಲ್ಲೇಖಿಸಿದ್ದಾರೆ.
ಈ ನಡುವೆ ಹೈಕಮಾಂಡ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಅಲ್ಲದೆ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸಚಿವರು ಮೈಸೂರು ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಇಂದು ಮಧ್ಯಾಹ್ನ ಸಿಎಂ ಭೇಟಿಯಾಗಿ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ. ಇತ್ತ ಮಂಗಳೂರು ಪ್ರವಾಸದಲ್ಲಿರುವ ಸಿಎಂ ಮಧ್ಯಾಹ್ನ ರಾಜಧಾನಿಗೆ ವಾಪಸ್ಸಾಗಲಿದ್ದಾರೆ.
ಕಳೆದ ರಾತ್ರಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ದೆಹಲಿಯಲ್ಲಿ ಅಮಿತ್ ಶಾ ಜೊತೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಕರಣ ರಾಜ್ಯದಲ್ಲಿ ಸರ್ಕಾರ ಮತ್ತು ಪಕ್ಷದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಮಾಹಿತಿ ಪಡೆದುಕೊಂಡ ಬಳಿಕ ಹೈಕಮಾಂಡ್ ಈಶ್ವರಪ್ಪ ರಾಜೀನಾಮೆಗೆ ಸೂಚನೆ ಕೊಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಗ್ಗೆ ಹೈಕಮಾಂಡ್ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮೂಲಕ ಹೈಕಮಾಂಡ್ ಗೆ ವಿವರಣೆ ನೀಡಲಾಗಿದೆ. ಈಶ್ವರಪ್ಪ ಅವರಿಂದ ವಿವರಣೆ ಪಡೆದು ಹೈಕಮಾಂಡ್ ಗೆ ರವಾನೆ ಮಾಡಲಾಗಿದೆ. ಈಶ್ವರಪ್ಪ ವಿವರಣೆಗೆ ಹೈಕಮಾಂಡ್ ಗರಂ ಆಗಿದೆ ಎಂದು ಹೇಳಲಾಗುತ್ತಿದೆ.