ಉಜಿರೆ- ಧರ್ಮಸ್ಥಳ ರಸ್ತೆ- ಅಪಾಯಕಾರಿ ಮರಗಳನ್ನು ತೆರವುಗೊಳಿಸಿದ ಇಲಾಖೆ!
ಬೆಳ್ತಂಗಡಿ : ರಸ್ತೆ ಅಂಚಿನಲ್ಲಿ ವಾಲಿದ್ದ ಮರಗಳ ತೆರವಿಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಉಜಿರೆಯಿಂದ ಧರ್ಮಸ್ಥಳಕ್ಕೆ ಸಾಗುವ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಿದೆ.
ಅಕೇಶಿಯಾ ಮರಗಳು ರಸ್ತೆ ಬದಿ ಅಪಾಯಕಾರಿಯಾಗಿ ಬೆಳೆದು ನಿಂತಿದ್ದವು.
ಗಾಳಿ ಮಳೆ ಸಂದರ್ಭದಲ್ಲಿ ರಸ್ತೆಗೆ ಬಿದ್ದು ಹಾನಿ ಉಂಟಾಗುವ ಸಾಧ್ಯತೆ ಇತ್ತು. ಜತೆಗೆ ರಸ್ತೆಬದಿ ಹಾದು ಹೋಗಿರುವ ವಿದ್ಯುತ್ ತಂತಿಗೂ ಮರಗಳ ಕೊಂಬೆಗಳು ಬಿದ್ದು ತಂತಿ, ಕಂಬಗಳು ತುಂಡಾಗಿ ವಿದ್ಯುತ್ ಪೂರೈಕೆಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇತ್ತು.
ಇದೀಗ ಈ ಭಾಗದಲ್ಲಿ ಹೆಚ್ಚಾಗಿ ಮಳೆ ಸುರಿಯುವ ಕಾರಣದಿಂದ, ಈ ಮರಗಳು ಇನ್ನಷ್ಟು ಅಪಾಯ ಎದುರಾಗುತ್ತಿತ್ತು. ಈ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸುವ ಕಾರಣ ಮೆಸ್ಕಾಂಗೂ ನಷ್ಟದ ಪ್ರಮಾಣ ಕಡಿಮೆಯಾಗಲಿದೆ. ಕೆಲವು ವರ್ಷಗಳಿಂದ ಆಗಾಗ ಮರಗಳು ಉರುಳುವುದರಿಂದ ಮೆಸ್ಕಾಂ ಲಕ್ಷಾಂತರ ರೂ.ನಷ್ಟ ಅನುಭವಿಸುತ್ತಿತ್ತು. ಆದರೂ ಮೆಸ್ಕಾಂ ಮತ್ತು ಅರಣ್ಯ ಇಲಾಖೆ ನಡುವಿನ ಹೊಂದಾಣಿಕೆ ಕೊರತೆಯಿಂದ ಮರಗಳ ತೆರವಿಗೆ ಕ್ರಮ ಕೈಗೊಂಡಿರಲಿಲ್ಲ.
ಶನಿವಾರ ವಾಹನ ದಟ್ಟಣೆ ಇರುವ ಸಮಯದಲ್ಲಿ ಮರ ತೆರವಿಗೆ ಮುಂದಾಗಿದ್ದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿತ್ತು.