ಕಡಬ ಜನಸ್ನೇಹಿ ಪೊಲೀಸರ ಹೆಸರಿಗೆ ಮಸಿ ಬಳಿದ ಉಪ್ಪಿನಂಗಡಿ ಪೊಲೀಸ್!! ಓಸಿ ಬೀಡ ತಿಂದು ಪಾನ್ ವಾಲನಿಗೆ ಹಲ್ಲೆ ಆರೋಪ
ಏಕಾಹಭಜನ ಮಹೋತ್ಸವಕ್ಕೆ ನಿಯೋಜನೆ ಕೊಂಡಿದ್ದ ಉಪ್ಪಿನಂಗಡಿ ಠಾಣೆಯ ಪೊಲೀಸರೊಬ್ಬರು ಕುಡಿದ ಮತ್ತಿನಲ್ಲಿ ಪಾನ್ ಅಂಗಡಿ ಮಾಲಕನಿಗೆ ಲಾಠಿಯಲ್ಲಿ ಯದ್ವಾತದ್ವಾ ಹೊಡೆದು ಅಂಗಡಿ ಚಲ್ಲಾಪಿಲ್ಲಿ ಮಾಡಿ ಕರ್ತವ್ಯದ ನಡುವೆ ಕಾರಿನಲ್ಲಿ ಪರಾರಿಯಾದ ಘಟನೆ ಎ.8 ರಂದು ಮಧ್ಯರಾತ್ರಿ ನಡೆದಿದೆ.
ವರ್ಷಂಪ್ರತಿ ಅದ್ದೂರಿಯಾಗಿ ನಡೆಯುವ ಏಕಾಹಭಜನ ಮಹೋತ್ಸವಕ್ಕೆ ಹೆಚ್ಚುವರಿಯಾಗಿ ಉಪ್ಪಿನಂಗಡಿ ಠಾಣೆಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ನಡು ರಾತ್ರಿ ಕಾಲೇಜು ರಸ್ತೆಯಲ್ಲಿರುವ ಪಾನ್ ಅಂಗಡಿಯತ್ತ ನಡೆದುಕೊಂಡು ಬಂದ ಶಿಶಿಲದ ಮೋಹನ್ ಮತ್ತು ಸೀತರಾಮ ಎಂಬ ಇಬ್ಬರು ಸಿಬ್ಬಂದಿಗಳು ಬಿಟ್ಟಿ ಬೀಡ ಜಗಿದು ಹಣ ನೀಡದೆ ಹೋಗಲು ಮುಂದಾಗಿದ್ದರು. ಹೀಗಾಗಿ ಪಾನ್ ಅಂಗಡಿಯಾತ 20 ರೂ ಹಣ ಕೊಡುವಂತೆ ವಿನಂತಿಸಿದ್ದ. ಇದರಿಂದ ಕುಪಿತಗೊಂಡ ಪೊಲೀಸ್ ಸಿಬ್ಬಂದಿ ತನ್ನ ಪೊಲೀಸರ ಬಳಿಯೇ ಹಣ ಕೇಳುತ್ತಿಯಾ ಎಂದು ಏರುಧ್ವನಿಯಲ್ಲಿ ಮಾತನಾಡಿ ಕೈಯಲ್ಲಿದ್ದ ಲಾಠಿಯಿಂದ ಯದ್ವತದ್ವಾ ಹೊಡೆದು ಪಾನ್ ಸ್ಟಾಲನ್ನು ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಸಿಬ್ಬಂದಿ ದುರ್ವತ್ರನೆ ತೋರಿದ ಬಳಿಕ ತಮ್ಮ ಕಾರಿನಲ್ಲಿ ಹೋಗಿ ಕುಳಿತ್ತಿದ್ದು ಇದನ್ನು ಗಮನಿಸಿದ ಸಾರ್ವಜನಿಕರು ಕಾರನ್ನು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಮೋಹನ್ ಎಂಬ ಪೊಲೀಸ್ ಸಿಬ್ಬಂದಿ ಎಸ್ಕೇಪ್ ಆಗಿದ್ದು ಸೀತರಾಮ ಎಂಬವರ ಕಾರಿನ ಸುತ್ತ ಜನ ಜಮಾಯಿಸಿದ್ದಾರೆ. ಇವರೂ ಪಾನಮತ್ತರಾಗಿ ಇರುವುದನ್ನು ಗಮನಿಸಿದ ಸಾರ್ವಜನಿಕರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ಅಮಾಯಕನ ಮೇಲೆ ಲಾಠಿಏಟು ನೀಡಿದನ್ನು ಪ್ರಶ್ನಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಹೊಡೆದ ಏಟಿಗೆ ಅಸ್ಪಸ್ಥಗೊಂಡ ರೀತಿಯಾಗಿದ್ದು ಕೂಡಲೇ ಕಡಬ ಸಮುದಾಯ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಮಾಹಿತಿ ತಿಳಿದ ಎಸ್.ಐ ರುಕ್ಮ ನಾಯ್ಕ ಹಾಗೂ ಸಿಬ್ಬಂದಿಗಳು ಆಸ್ಪತ್ರೆಯತ್ತ ಧಾವಿಸಿದ್ದಾರೆ. ಈ ವೇಳೆ ಸಂಘಟನೆಯ ಮುಖಂಡರೊಂದಿಗೆ ಗಂಭೀರ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜಿಯಲ್ಲಿ ಪ್ರಕರಣ ಮುಗಿಸುವ ತೀರ್ಮಾನಕ್ಕೆ ಬಂದಿದ್ದು ಬೀಡ ಸ್ಟಾಲ್ ನಾಶ ಪಡಿಸಿದಕ್ಕೆ ಸುಮಾರು 5 ಸಾವಿರ ರೂ ಮೊತ್ತ ಹಾಗೂ ಕ್ಷಮೆಯಾಚಿಸುವುದಾಗಿ ತೀರ್ಮಾಣಕ್ಕೆ ಬರಲಾಯಿತು.ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಠಾಣೆಗೆ ಬಂದಿದ್ದಾರೆ.
ರಾತ್ರೋರಾತ್ರಿ ಠಾಣೆಗೆ ಬಂದ ವೃತ್ತ ನಿರೀಕ್ಷಕರು: ಕಡಬದಲ್ಲಿ ನಡೆದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ರಾತ್ರೋ ರಾತ್ರಿ ಠಾಣೆಗೆ ಬಂದು ಮಾಹಿತಿ ಪಡೆದಿದ್ದಾರೆ .ಇಲಾಖೆಗೆ ಕಪ್ಪು ಚುಕ್ಕೆ ತಂದ ಸಿಬ್ಬಂದಿಯ ನಡೆಗೆ ಗರಂ ಗೊಂಡ ವೃತ್ತ ನಿರೀಕ್ಷಕರು ಎಸ್.ಐ ಅವರಿಗೆ ಕೂಡಲೇ ಈ ಬಗ್ಗೆ ವರದಿ ನೀಡುವಂತೆ ಆದೇಶಿಸಿದರು. ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು, ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಏಕಾಹ ಭಜನಾ ಕಾರ್ಯಕ್ರಮದಲ್ಲಿ ಹಗಲಿರುಳು ಸಂಘಟಕರ ಜೊತೆ ಕಡಬದ ಪೊಲೀಸರು ಶ್ರಮಿಸಿದ್ದಾರೆ. ಠಾಣೆ ಎಸ್.ಐ ಹಾಗೂ ಸಿಬ್ಬಂದಿಗಳ ಮಾನವನ್ನು ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದ ಈ ಇಬ್ಬರು ಪೊಲೀಸರು ಕುಡಿದು ಗಲಾಟೆ ಮಾಡಿ ಹರಾಜು ಹಾಕಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ. ಕೊನೆಯ ದಿನ ಕರ್ತವ್ಯದಲ್ಲಿದ್ದ ಎಸ್.ಐ ರುಕ್ಮ ನಾಯ್ಕ ಅವರ ಘನತೆಗೂ ಧಕ್ಕೆ ತಂದಂತಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.