ನಟಿ ಸಂಜನಾ ಗಲ್ರಾನಿ ತಲೆ ಬೋಳಿಸಿಕೊಂಡದ್ದು ಶುದ್ಧ ಸುಳ್ಳು !! | ನಟಿಯ ಈ ನಾಟಕದ ಹಿಂದಿನ ಅಸಲಿ ಸತ್ಯ ಇದೀಗ ಬಯಲು

Share the Article

ಇತ್ತೀಚೆಗೆ ನಟಿ ಸಂಜನಾ ಕೇಶಮುಂಡನ ಮಾಡಿಸಿಕೊಂಡ ಫೋಟೋ ಭಾರಿ ಸದ್ದು ಮಾಡಿತ್ತು. ‌ಸಮಾಜಮುಖಿ ಕಾರ್ಯಕ್ಕಾಗಿ ನಟಿ ಸಂಜನಾ ಗಲ್ರಾನಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಅಂತ ಸುದ್ದಿ ಹರಿದಾಡುತ್ತಿತ್ತು. ನಟಿ ಹೀಗೇಕೆ ಮಾಡಿಕೊಂಡರು ಎಂಬ ಚರ್ಚೆ ಕೂಡ ಭಾರಿ ಜೋರಾಗಿತ್ತು. ಆದರೆ ಅದರ ಅಸಲಿ ಸತ್ಯ ಇದೀಗ ಹೊರಬಿದ್ದಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ನಟಿ ಸಂಜನಾ.

ಹೌದು. ತುಂಬು ಗರ್ಭಿಣಿಯಾಗಿರುವ ಸಂಜನಾ ಹೀಗೇಕೆ ಮಾಡಿಕೊಂಡರು ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಅವರು ಮದುವೆ ಆಗಿದ್ದು ಮುಸ್ಲಿಂ ಧರ್ಮದ ಹುಡುಗನಾಗಿದ್ದರಿಂದ, ಆ ಕುಟುಂಬ ತಲೆ ಬೋಳಿಸಿಕೊಳ್ಳಲು ಒಪ್ಪುತ್ತದಾ ಎನ್ನುವ ಅನುಮಾನವೂ ಮೂಡಿತ್ತು. ಏನೇ ಆದರೂ, ಒಳ್ಳೆಯ ಕೆಲಸಕ್ಕಾಗಿ ಅವರು ಕೇಶಮುಂಡನ ಮಾಡಿಸಿದ್ದರಿಂದ ನಾಡಿಗೆ ನಾಡೇ ಅವರನ್ನು ಹೊಗಳಿತ್ತು. ಇದೀಗ ನಂಬಿದ ಎಲ್ಲರಿಗೂ ಸಂಜನಾ ಫೂಲ್ ಮಾಡಿದ್ದಾರೆ.

ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳು, ಅದು ಕೇವಲ ಏಪ್ರಿಲ್ ಫೂಲ್ ಗಾಗಿ ಮಾಡಿದ್ದು ಎಂದು ಮನವರಿಕೆ ಮಾಡಿಕೊಡಲು ಸಂಜನಾ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅದಕ್ಕೂ ಮುನ್ನ ಬೋಳು ತಲೆಯ ಫೋಟೋ ಹಾಕಿ ‘ಚೆಲುವು ಎನ್ನುವುದು ನೋಡುವವರ ಕಣ್ಣಿನಲ್ಲಿದೆ. ನಾನು ದೇವರ ಮೇಲಿಟ್ಟ ನಂಬಿಕೆಗಾಗಿ ನನ್ನ ತಲೆಗೂದಲನ್ನು ನಾನು ತ್ಯಾಗ ಮಾಡಿದ್ದೇನೆ. ನಾನು ಈಗಾಗಲೇ ಅನೇಕ ಸಂಕಷ್ಟಗಳನ್ನು ದಾಟಿಕೊಂಡು ಬಂದಿದ್ದೇನೆ. ಅವೆಲ್ಲದಕ್ಕೂ ಶಕ್ತಿ ಕೊಟ್ಟಿದ್ದು ದೇವರು. ಹಾಗಾಗಿ ನಾನು ದೇವರಿಗೆ ಅವುಗಳನ್ನು ಅರ್ಪಿಸಿದ್ದೇನೆ. ನನ್ನ ಮಗುವಿಗಾಗಿ ನಾನು ಹರಕೆ ತೀರಿಸಿದ್ದೇನೆ’ ಹೀಗೆ ಭಾವನಾತ್ಮಕವಾಗಿ ಕರಳು ಹಿಂಡುವಂತೆ ಫೋಟೋ ಜೊತೆ ಬರೆದುಕೊಂಡಿದ್ದರು.

ದೇವರಿಗೆ ಹರಕೆ ಹೊತ್ತಿರಬಹುದು ಅಥವಾ ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿರಬಹುದು ಎಂದು ನಂಬಿದ್ದ ಜನಕ್ಕೆ ಸಂಜನಾ ಫೂಲ್ ಮಾಡಿದ್ದರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಈ ರೀತಿ ಭಾವನಾತ್ಮಕವಾಗಿ ಯಾರೊಂದಿಗೂ ಆಟ ಆಡಬಾರದು ಎಂದು ಕೆಲವರು ಕಟುವಾಗಿಯೇ ತಿವಿದಿದ್ದರೆ, ಇದು ಫೇಕ್ ಎಂದು ಮೊದಲೇ ಗೊತ್ತಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಟ್ರೋಲ್ ಪೇಜ್ ಗಳು ಮಾತ್ರ ಸಂಜನಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿವೆ. ಇದೊಂದು ಭಾವನಾತ್ಮಕ ವಿಷಯವಾಗಿದ್ದರಿಂದ ಈ ರೀತಿಯಾಗಿ ಜನರನ್ನು ಮೂರ್ಖರನ್ನಾಗಿ ಮಾಡಬಾರದು ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.

https://www.instagram.com/reel/Cb9zobTo5bs/?utm_medium=copy_link

ತಮಗೆ ಪ್ರಚಾರದ ಅಗತ್ಯವಿಲ್ಲವೆಂದು ಹಲವಾರು ಭಾರೀ ಸಂಜನಾ ಹೇಳಿಕೊಂಡಿದ್ದರೂ, ತಲೆ ಬೋಳಿಸಿದ ಫೋಟೋವನ್ನು ಹಾಕಿರುವುದು ಏತಕ್ಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ತಲೆ ಬೋಳಿಸಿಕೊಂಡಿರುವ ಫೋಟೋ ಅಷ್ಟೇ ಹಾಕಿದ್ದರೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಆ ಫೋಟೋ ಜೊತೆ ಹಾಕಿರುವ ಅಕ್ಷರಗಳ ಸಾಲುಗಳು ಅಭಿಮಾನಿಗಳನ್ನು ಕೆರಳಿಸಿವೆ. ಧಾರ್ಮಿಕ ಹೆಸರಿನಲ್ಲಿ ಈ ರೀತಿ ಆಟ ಆಡುವುದು ಸರಿಯಲ್ಲ ಎಂದು ಖಾರವಾಗಿಯೇ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

Leave A Reply