ಬಪ್ಪನಾಡು ಕ್ಷೇತ್ರದ ದೇವಳದ ಹೆಸರಿನ ಬದಲು ಹಜರತ್ ಬಪ್ಪಬ್ಯಾರಿ ಹೆಸರು ! ಹೆಸರು ಸರಿಪಡಿಸಿದ ಗೂಗಲ್ !
ಹಿಂದೂ ಜಾತ್ರೆಗಳಲ್ಲಿ ಅನ್ಯಧರ್ಮೀಯ ವ್ಯಾಪಾರಿಗಳಿಗೆ ನಿಷೇಧ ಹೇರುವ ವಿವಾದ ರಾಜ್ಯದ ಇತರ ದೇವಾಲಗಳಿಗೂ ಹಬ್ಬಿತ್ತು. ಅದರಂತೇ, ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಕೂಡಾ ನಿಷೇಧ ಹೇರುವಂತೆ ಒತ್ತಡ ಬಂದಿತ್ತು.
ಬಪ್ಪನಾಡು ಕ್ಷೇತ್ರದ ಜಾತ್ರಾ ಕಾರ್ಯಕ್ರಮ ಇತ್ತೀಚೆಗೆ ಮುಗಿದಿತ್ತು. ಅನಂತರ ಕಿಡಿಗೇಡಿಗಳು ಗೂಗಲ್ ಮ್ಯಾಪ್ ನಲ್ಲಿ ದೇವಳದ ಹೆಸರನ್ನು ಬದಲಾಯಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ದೇವಾಲಯದ ಆಡಳಿತ ಮಂಡಳಿ ತಕ್ಷಣ ಸ್ಪಂದಿಸಿದೆ. ಗೂಗಲ್ ಮ್ಯಾಪ್ ನಲ್ಲಿ ಹಿಂದಿನಂತೆಯೇ ದೇವಸ್ಥಾನದ ಹೆಸರನ್ನು ಬದಲಾಯಿಸಲಾಗಿದೆ.
ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ ಎಂದಿದ್ದನ್ನು ಕಿಡಿಗೇಡಿಗಳು ಹಜ್ರತ್ ಬಪ್ಪಬ್ಯಾರಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ ಎಂದು ಗೂಗಲ್ ಮ್ಯಾಪ್ ನಲ್ಲಿ ಎಡಿಟ್ ಮಾಡಿದ್ದರು. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ದುರುದ್ದೇಶದಿಂದ ಕಿಡಿಗೇಡಿಗಳು ಹೆಸರನ್ನು ಬದಲಾಯಿಸಿದ್ದರು.
ಈ ವಿದ್ಯಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ದೇವಳದ ಆಡಳಿತ ಮಂಡಳಿಯ ಸದಸ್ಯರು, ಕ್ಷೇತ್ರದ ಭಕ್ತರು ಸೇರಿ, ಮಂಗಳೂರು ಕಮಿಷನರ್, ಮೂಲ್ಕಿ ಪೊಲೀಸ್ ಠಾಣೆ ಮತ್ತು ಮಂಗಳೂರು ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಶನಿವಾರ (ಏಪ್ರಿಲ್ 2) ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಭಕ್ತರ ಮತ್ತು ಕ್ಷೇತ್ರದ ಆಡಳಿತ ಮಂಡಳಿಯ ಒತ್ತಾಯ ಮತ್ತು ಗೂಗಲ್ ರಿವ್ಯೂ ಬಳಿಕ, ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ, ಎಂದು ಗೂಗಲ್ ಮ್ಯಾಪ್ ನಲ್ಲಿ ಬದಲಾವಣೆ ಮಾಡಲಾಗಿದೆ.
ಈ ಕೃತ್ಯ ಎಸಗಿದವರನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರಿಗೆ ಸಾಧ್ಯವಿದೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಒತ್ತಾಯ ಮಾಡಿದ್ದಾರೆ.