ಮಂಗಳೂರು:ಹೊಸರೂಪ ಪಡೆದುಕೊಳ್ಳುತ್ತಿದೆ ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣ!! ಕಾಮಗಾರಿ ಪೂರ್ಣಗೊಂಡ ಬಳಿಕ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ
ಮಂಗಳೂರು: ನಗರದ ಹೃದಯಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಖಾಸಗಿ ಬಸ್ಸು ನಿಲ್ದಾಣ ದಲ್ಲಿ ಮೊದಲನೇ ಹಂತದ ಕಾಮಗಾರಿ ಪ್ರಾರಂಭಗೊಂಡಿದ್ದು ಹೊಸ ರೂಪ ಪಡೆದುಕೊಳ್ಳುತ್ತಿದೆ. ಮೂಲ ಸೌಕರ್ಯಗಳ ವ್ಯವಸ್ಥೆಯಡಿ ಮಂಗಳೂರು ಮಹಾನಗರ ಪಾಲಿಕೆಯು ಈ ಕಾಮಗಾರಿಯ ಜವಾಬ್ದಾರಿ ಹೊತ್ತಿದ್ದು, ಸುಮಾರು 4.2 ಕೋಟಿ ವೆಚ್ಚದಲ್ಲಿ ಬಿರುಸಿನ ಕಾಮಗಾರಿ ಮಳೆಗಾಲ ಪ್ರಾರಂಭಕ್ಕೂ ಮುನ್ನ ಪೂರ್ಣಗೊಳ್ಳಲಿದೆ.
ಬಸ್ ನಿಲ್ದಾಣದ ಎದುರು ಭಾಗದಲ್ಲಿ ಕಾಂಕ್ರಿಟ್, ನಿಲ್ದಾಣ ವಿಸ್ತರಣೆ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ಲುವ ಪ್ರದೇಶ, ನಿಲ್ದಾಣದ ಹಿಂಭಾಗ ಹೀಗೆ ಹಲವು ಕಾಮಗಾರಿಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ನಿಲುಗಡೆಗೆ ಇದ್ದ ಐದು ಶೆಲ್ಟರ್ ಗಳ ಪೈಕಿ ನಾಲ್ಕನ್ನು ಕೆಡವಿ ಹಾಕಲಾಗಿದ್ದು, ಒಂದರಲ್ಲಿ ಪ್ರಯಾಣಿಕರಿಗೆ ನಿಲ್ಲಲು ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲಸ ಪೂರ್ಣಗೊಂಡ ಬಳಿಕ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಬೀಳಲಿದೆ ಎಂದು ತಿಳಿದುಬಂದಿದೆ.