ರಾತ್ರೋರಾತ್ರಿ ಕದ್ದುಮುಚ್ಚಿ ಬಜೆಟ್ ಮಂಡಿಸಿದ ಬಿಬಿಎಂಪಿ !! | ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಿಷ್ಟಾಚಾರ ಮೀರಿ ಬಜೆಟ್ ಮಂಡಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬಜೆಟ್ ಮಂಡನೆ ಎಂದರೆ ಅದರ ಕುರಿತಾಗಿ ಕೆಲವು ವಾರಗಳ ಹಿಂದೆ ಪೂರ್ವಸಿದ್ಧತೆ ಹಾಗೂ ಬಜೆಟ್ ಕುರಿತ ಚರ್ಚೆಗಳು ಆರಂಭವಾಗುತ್ತದೆ. ಹೀಗಿರುವಾಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾತ್ರೋರಾತ್ರಿ ಬಜೆಟ್ ಮಂಡನೆ ಮಾಡಿದ್ದು, ಯಾರಿಗೂ ಮಾಹಿತಿ ನೀಡದೆ ಕದ್ದುಮುಚ್ಚಿ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗಿದೆ.
10,480 ಕೋಟಿ ಮೊತ್ತದ ಬಜೆಟ್ ಇದಾಗಿದ್ದು, ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಕೌನ್ಸಿಲ್ ಶಿಷ್ಟಾಚಾರ ಮೀರಿ ಈ ಬಾರಿ ಬಜೆಟ್ ಮಂಡಿಸಲಾಗಿದೆ. ನಿರ್ವಹಣಾ ಶುಲ್ಕ ಹಾಗೂ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಒಟ್ಟಾರೆ ಬಜೆಟ್‍ನ ಶೇ.76ರಷ್ಟು ಅನುದಾನ ನಿರ್ವಹಣಾ ಶುಲ್ಕ, ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ವಿಶೇಷ ಚೇತನ ವ್ಯಕ್ತಿಗಳ ಅಭಿವೃದ್ಧಿಗೆ 370 ಕೋಟಿ ರೂ., ಹಿಂದುಳಿದ ವರ್ಗಗಳ ಅಭಿವೃದ್ದಿಗೆ 346 ಕೋಟಿ ರೂ., ಕಲ್ಯಾಣ ಕಾರ್ಯಕ್ರಮಕ್ಕೆ 428 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗೆ 1,469 ಕೋಟಿ ರೂ., ಆರೋಗ್ಯ ವಲಯಕ್ಕೆ 75 ಕೋಟಿ ರೂ. ಮೀಸಲಿಡಲಾಗಿದೆ.
ತಡರಾತ್ರಿ 11.24ಕ್ಕೆ ಆಯ್ಯವ್ಯಯ ಮಂಡನೆ ಆಗಿರುವ ಬಗ್ಗೆ ಪಾಲಿಕೆ ಮಾಹಿತಿ ನೀಡಿದೆ. ಬಜೆಟ್ ಮಂಡನೆ ವಿಚಾರದಲ್ಲಿ ಜನಪ್ರತಿನಿಧಿಗಳ, ಸಚಿವರ ಅಭಿಪ್ರಾಯ ಸಂಗ್ರಹಿಸಲು ಪಾಲಿಕೆ ಸೋತಿದೆ. ಸದ್ಯ ತರಾತುರಿಯಲ್ಲಿ ಹಲವು ಬಜೆಟ್ ಯೋಜನೆಗಳ ಸೇರ್ಪಡೆಗೊಳಿಸಿ ಬಜೆಟ್ ಮಂಡನೆ ಮಾಡಲಾಗಿದೆ.