ಹಲಾಲ್ ಮಾಂಸ ಎಂದರೇನು ? ಹಲಾಲ್ ಕಟ್ ನಿಯಮಗಳೇನು ? ಇಲ್ಲಿದೆ ನೋಡಿ
ಹಿಜಾಬ್ ವಿವಾದದ ಬೆನ್ನಲ್ಲೇ ರಾಜ್ಯದಲ್ಲಿ ಹಲಾಲ್ ಕಟ್ ಮಾಂಸದ ವಿಚಾರ ಭುಗಿಲೆದ್ದಿದೆ. ಹಿಂದೂ ಜನ ಜಾಗೃತಿ ಸಮಿತಿ ಹಲಾಲ್ ಮಾಂಸವನ್ನು ಬಹಿಷ್ಕರಿಸುವಂತೆ ಧ್ವನಿ ಎತ್ತಿದೆ. ಯುಗಾದಿ ಮರು ದಿವಸ ಕರ್ನಾಟಕದ ಕೆಲ ಭಾಗಗಳಲ್ಲಿ ಆಚರಿಸುವ ಹೊಸತೊಡಕು ವೇಳೆ ಮಾಂಸ ತಿನ್ನಲಾಗುತ್ತದೆ. ಈ ವೇಳೆ ಹಲಾಲ್ ಮಾಂಸವನ್ನು ಸೇವಿಸದಂತೆ ಕರೆ ನೀಡಲಾಗುತ್ತಿದೆ.
ನಮ್ಮ ಸುತ್ತಮುತ್ತ ಹಲವು ಮಾಂಸದಂಗಡಿಗಳಲ್ಲಿ ಹಲಾಲ್ ಕಟ್ ಎಂಬ ಪದ ಬಳಕೆಯನ್ನ ನೋಡಿರುತ್ತೀರಿ. ಮುಸ್ಲಿಮರ ಬಹುತೇಕ ಮಾಂಸದಂಗಡಿಗಳು ಹಲಾಲ್ ಕಟ್ ಆಗಿರುತ್ತವೆ.
ಮಾಂಸಗಳ ಗುಣಮಟ್ಟ ತೋರಿಸಲು ಹಲವು ಕಂಪನಿಗಳು ಹಲಾಲ್ ಕಟ್ ಪದವನ್ನು ಉಪಯೋಗಿಸುತ್ತವೆ. ಆದರೆ ಚೀನಾ ದೇಶದಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಹಲಾಲ್ ಮಾಂಸ, ಹಲಾಲ್ ಕಟ್ ಎಂದರೇನು ಇಲ್ಲಿದೆ ನೋಡಿ
ಇದು ಅರೇಬಿಕ್ ಪದವಾಗಿದ್ದು, ಇದು ಇಸ್ಲಾಮಿಕ್ ಕಾನೂನಿನ ಪ್ರಕಾರ ಅನುಮತಿಸುವ ಆಹಾರ ಎಂದರ್ಥವಾಗಿದೆ. ಇಸ್ಲಾಮ್ ಧರ್ಮದಲ್ಲಿ ಪರಿಶುದ್ಧ ಆಹಾರವೆಲ್ಲವೂ ಹಲಾಲ್ ಎಂದು ಪರಿಗಣಿಸಲಾಗಿದೆ. ಹಲಾಲ್ ಪ್ರಾಣಿಗಳ ಹತ್ಯೆಯನ್ನು “ಝಬಿಹಾ” ಎಂದು ಸಹ ಕರೆಯಲಾಗುತ್ತದೆ. ಕುರಿ, ಕೋಳಿ, ಒಂಟೆ, ದನ, ಮೀನು ಇತ್ಯಾದಿ ಪ್ರಾಣಿಗಳ ಮಾಂಸವು ಹಲಾಲ್ ಎನಿಸುತ್ತವೆ.
ಹಲಾಲ್ ಕಟ್ ಎಂದರೇನು? ಅದರ ನಿಯಮವೇನು ?
ತಿನ್ನುವ ಪ್ರಾಣಿಗಳನ್ನ ಕೊಲ್ಲುವುದಕ್ಕೂ ಇಸ್ಲಾಮ್‍ನಲ್ಲಿ ನಿರ್ದಿಷ್ಟ ಕ್ರಮ ಮತ್ತು ನಿಯಮಗಳಿವೆ. ಒಂದೊಂದು ಪ್ರಾಣಿಯ ವಧೆಗೂ ಪ್ರತ್ಯೇಕ ನಿಯಮವಿರುತ್ತದೆ. ಒಂದು ಸಾಮಾನ್ಯ ನಿಯಮವೆಂದರೆ ವಧಿಸಲ್ಪಟ್ಟ ಪ್ರಾಣಿಯ ದೇಹದಿಂದ ರಕ್ತವೆಲ್ಲವೂ ಹೊರಬರಬೇಕು. ವಧಿಸುವ ಮೊದಲೇ ಸತ್ತಿದ್ದ ಪ್ರಾಣಿಗಳು ಹಾಗೂ ವಧಿಸುವ ವೇಳೆ ರೋಗ, ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳನ್ನು ಮುಸ್ಲಿಮರು ತಿನ್ನುವಂತಿಲ್ಲ.
ಪ್ರಾಣಿಯನ್ನು ತಲೆಕೆಳಗಾಗಿ ನೇತುಹಾಕಬೇಕು. ವಧಿಸುವ ವ್ಯಕ್ತಿಯು ಅಲ್ಲಾಹುವಿನ ನಾಮೋಚ್ಛಾರ ಮಾಡುತ್ತಾ ವಧಿಸಬೇಕು. ತಲೆಯನ್ನು ಒಡೆಯದೇ ಗಂಟಲು ಸೀಳಿ ಸಾಯಿಸಬೇಕು ಎಂಬಿತ್ಯಾದಿ ನಿಯಮಗಳು ಕುರಾನ್‍ನಲ್ಲಿ ತಿಳಿಸಲಾಗಿದೆ. ಕೋಳಿ ಅಥವಾ ಕುರಿಯನ್ನು ಕಡಿಯುವ ಮುಂಚೆ ಮುಸ್ಲಿಂ ಧರ್ಮದಲ್ಲಿ ಕುರಾನಿನ ಕೆಲ ಸಾಲುಗಳನ್ನು ಉಚ್ಚರಿಸಿ ಕೊಲ್ಲಲಾಗುತ್ತದೆ. ಮಾಂಸದಂಗಡಿಗಳಲ್ಲಿ ಪ್ರಾಣಿಯನ್ನು ವಧಿಸುವ ಮೊದಲು ಅದರ ಬಾಯಿಗೆ ನೀರು ಹಾಕುತ್ತಾರೆ. ಈ ಎಲ್ಲಾ ನಿಯಮಗಳನ್ನು ಅನುಸರಿಸುವ ಮೂಲಕ ಹಲಾಲ್ ಕಟ್ ಮಾಡಲಾಗುತ್ತದೆ.
ಹಿಂದೂ ಸಂಪ್ರದಾಯದಲ್ಲಿ ಪ್ರಾಣಿಗಳನ್ನು ನೇರವಾಗಿಯೇ ವಧಿಸುತ್ತಾರೆ. ಆದರೆ ಮುಸ್ಲಿಂ ಧರ್ಮದಲ್ಲಿ ಕೆಲ ರೀತಿ ರಿವಾಜುಗಳಿವೆ. ಮುಸ್ಲಿಂ ಧರ್ಮಗಳಲ್ಲಿ ಏಡಿಯನ್ನು ಹೆಚ್ಚಾಗಿ ತಿನ್ನಲು ಬಯಸುವುದಿಲ್ಲ. ಏಕೆಂದರೆ ತಲೆ ಇಲ್ಲದ ಪ್ರಾಣಿಗಳನ್ನು ತಿನ್ನುವುದು ಅವರಲ್ಲಿ ಮಹಾ ಪಾಪ ಎಂಬುವ ವಾಡಿಕೆಯಿದೆ.