ರೈತರಿಗೊಂದು ಗುಡ್ ನ್ಯೂಸ್ !! | 13 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲು ಮತ್ತೊಮ್ಮೆ ಅವಕಾಶ | ಸುಳಿವು ನೀಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್
ರೈತರಿಗೊಂದು ಸರ್ಕಾರ ಸಿಹಿಸುದ್ದಿ ನೀಡಿದೆ. ಸಹಕಾರ ಸಾಲಮನ್ನಾ ಮಾಡಲು ಸರ್ಕಾರ ಮತ್ತೊಮ್ಮೆ ಚಿಂತಿಸಿರುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. ಷರತ್ತು ಪೂರೈಸದೇ ಬಾಕಿ ಉಳಿದಿರುವ 13 ಸಾವಿರ ಕೋಟಿ ರೂ. ರೈತರ ಸಹಕಾರ ಸಾಲಮನ್ನಾ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, 2017-18ನೇ ಸಾಲಿನಲ್ಲಿ ಬಾಕಿ ಇದ್ದ ಸಹಕಾರ ಸಂಘದಿಂದ ಪಡೆದ ಅಲ್ಪಾವಧಿ ಸಾಲ ಮನ್ನಾ ಮಾಡಲಾಗಿದೆ. 1 ಲಕ್ಷ ರೂ.ಸಾಲ ಮನ್ನಾ ಮಾಡಲು 2018ರ ಆಗಸ್ಟ್ 14ರಂದು ಆದೇಶ ಹೊರಡಿಸಲಾಗಿತ್ತು. ಅದರಂತೆ 20.38 ಲಕ್ಷ ರೈತರ 9,448.62 ಕೋಟಿ ರೂ. ಸಾಲಮನ್ನಾ ಮಾಡುವ ಅಂದಾಜು ಮಾಡಲಾಗಿತ್ತು. 18.95 ಲಕ್ಷ ರೈತರ ಸಯಂ ದೃಢೀಕರಣ ಪತ್ರ ಪಡೆಯಲಾಗಿದ್ದು, ಇದರಲ್ಲಿ 17.37 ಲಕ್ಷ ರೈತರ 8,154.98 ಕೋಟಿ ರೂ. ಸಾಲ ಮನ್ನಾ ಮಾಡಲು ಹಸಿರುಪಟ್ಟಿ ತಯಾರಿಸಲಾಗಿದೆ. 2018-19ರಲ್ಲಿ 5.57 ಲಕ್ಷ ರೈತರ 2,600 ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
2019-20ರಲ್ಲಿ 10.91 ಲಕ್ಷ ರೈತರ 5,092.33 ಕೋಟಿ ರೂ.ಸಾಲ ಮನ್ನಾ ಮಾಡಲಾಗಿದೆ. 2020-21ರಲ್ಲಿ 58 ಸಾವಿರ ರೈತರ 295.14 ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ. ಒಟ್ಟು 7,987.47 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. 31 ಸಾವಿರ ರೈತರಿಗೆ 167.51 ಕೋಟಿ ರೂ. ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 13,500 ರೈತರ ಅರ್ಹತೆ ಗುರುತಿಸುವುದು ಬಾಕಿ ಇದೆ. ಇದರ ಗ್ರೀನ್ ಲಿಸ್ಟ್ ಬಂದ ಬಳಿಕ ಅವರ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಹೇಳಿದರು.
2020ರ ಮಾರ್ಚ್ ತಿಂಗಳ ಅಂತ್ಯಕ್ಕೆ ಹೊರ ಬಾಕಿ ಇರುವ 10,897 ಬೀದಿ ಬದಿ ವ್ಯಾಪಾರಿಗಳ 7.56 ಕೋಟಿ ರೂ. ಸಾಲ ಮನ್ನಾ ಮಾಡಿ ಹಣ ಬಿಡುಗಡೆ ಮಾಡಲಾಗಿದೆ. 50 ಸಾವಿರ ರೂ.ವರೆಗೆ ರಾಜ್ಯದ ಮೀನುಗಾರರ ಸಾಲ ಮನ್ನಾ ಮಾಡಲು ಉದ್ದೇಶಿಸಲಾಗಿದೆ.
10,492 ಮೀನುಗಾರ 49 ಕೋಟಿ ರೂ.ಸಾಲ ಮನ್ನಾ ಮಾಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಡಿಸಿಸಿ ಮೂಲಕ 2021ರ ಜನವರಿ ಅಂತ್ಯದ ವೇಳೆಗೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲದ ಅಸಲನ್ನು 2021ರ ಜೂನ್ 31ರೊಳಗೆ ಪಾವತಿ ಮಾಡಿದ್ದರೆ ಸಂಬಂಧಿಸಿದ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. 55,546 ರೈತರ 241 ಕೋಟಿ ರೂ. ಬಡ್ಡಿ ಮನ್ನಾ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಾಲ ವಿತರಣೆ ಬಗ್ಗೆ ಉತ್ತರಿಸಿದ ಅವರು, 2018-19ರಲ್ಲಿ 20.15 ಲಕ್ಷ ರೈತರಿಗೆ ಸಾಲ ವಿತರಣೆಯ ಗುರಿ ಹೊಂದಲಾಗಿತ್ತು. 11,350 ಕೋಟಿ ರೂ.ಹಣ ಬಿಡುಗಡೆ ಮಾಡಲು ಅಂದಾಜಿಸಲಾಗಿತ್ತು. 2019-20ರಲ್ಲಿ 22.58 ಲಕ್ಷ ರೈತರಿಗೆ 13,577 ಕೋಟಿ ರೂ. ಸಾಲ ವಿತರಿಸಲಾಗಿದೆ. 2020-21ನೇ ಸಾಲಿನಲ್ಲಿ 26.19 ಲಕ್ಷ ರೈತರಿಗೆ 17,901 ಕೋಟಿ ರೂ. ಸಾಲ ವಿತರಿಸಲಾಗಿದೆ.
2021-22ರಲ್ಲಿ 30.86 ಲಕ್ಷ ರೈತರಿಗೆ 20,800 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. 20 ಲಕ್ಷ ರೈತರಿಗೆ ವಾಣಿಜ್ಯ ಬ್ಯಾಂಕ್ ನಿಂದ ಸಾಲ ನೀಡಲಾಗಿದೆ. 30 ಲಕ್ಷ ರೈತರಿಗೆ ಸಹಕಾರ ಸಂಘಗಳಿಂದ ಸಾಲ ನೀಡಾಗಿದೆ ಎಂದು ಮಾಹಿತಿ ನೀಡಿದರು.