ಅವನ್ ಬಿಟ್ ಇವನ್ ಬಿಟ್ ಅವನ್ : ಮಾಜಿ ಹಾಲಿ ಪ್ರಿಯಕರ ಮಧ್ಯೆ ಗಲಾಟೆ |ಡಿವೋರ್ಸಿಯ ಸಖ್ಯಕ್ಕಾಗಿ ನಡೆಯಿತು ಕೊಲೆ ಯತ್ನ !
ಪ್ರೀತಿ ಮಾಯೆ ಹುಷಾರು ಅಂತ ಹೇಳುವ ಮಾತು ನಿಜ. ಪ್ರೀತಿಯಲ್ಲಿ ಬಿದ್ದವರು ಯಾರೇ ಆದರೂ ತನ್ನ ಪ್ರೇಯಸಿ ಅಥವಾ ಪ್ರಿಯಕರನಿಗೆ ಉಪದ್ರ ಕೊಟ್ಟರೆ ಸಹಿಸುವುದಿಲ್ಲ. ಈ ರೀತಿಯ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅದು ಕೂಡಾ ಹಾಲಿ ಹಾಗೂ ಮಾಜಿ ಪ್ರಿಯಕರನ ಮಧ್ಯೆ. ಅಂತದ್ದೇನಾಯ್ತು ? ಇಲ್ಲಿದೆ ಸ್ಟೋರಿ.
ತನ್ನ ಪ್ರೇಯಸಿಗೆ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ ಕೋಪಗೊಂಡ ಹಾಲಿ ಪ್ರಿಯಕರ, ಮಾಜಿ ಪ್ರಿಯಕರನನ್ನು ಅಪಹರಿಸಿ ಥಳಿಸಿ, ಕೊಲೆಗೆ ಯತ್ನಿಸಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಸೇರಿದಂತೆ ಐದು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಚಂದ್ರಾಲೇಔಟ್ ನಿವಾಸಿ ಅರುಣ್ ನಾಯ್ಡು, ಆರ್.ಆರ್.ನಗರದ ರೌಡಿ ಕಾರ್ತಿಕ್ ಅಲಿಯಾಸ್ ಅರ್ನಾಲ್ಡ್, ಸಹಚರರಾದ ಯಶವಂತ್, ವಿಶಾಲ್ ಹಾಗೂ ಸಂಜೀವ್ ಬಂಧಿತ ಆರೋಪಿಗಳು.
ಆರೋಪಿಗಳಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ನಾಗರಬಾವಿ ಸಮೀಪ ತನ್ನ ಪ್ರಿಯತಮೆಯ ಮಾಜಿ ಸ್ನೇಹಿತ ಶ್ರೀಕಾಂತ್ನನ್ನು ಸಹಚರರ ಜತೆ ಸೇರಿ ಅಪಹರಿಸಿ ಅರುಣ್ ಮನಬಂದಂತೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಸಿಸಿಬಿ ಸಂಘಟಿತ ಅಪರಾಧ ದಳ ಎಸಿಪಿ
ಎಚ್.ಎನ್.ಧರ್ಮೇಂದ್ರಯ್ಯ ನೇತೃತ್ವದ ತಂಡ, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿನ್ನೆಲೆ : ಲೋಕೇಶ್ ಹಾಗೂ ಚಂದ್ರಾ ಲೇಔಟ್ನ ಸಂಗೀತಾ (ಹೆಸರು ಬದಲಾಯಿಸಲಾಗಿದೆ)14 ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ 1 ಮಗ ಇದ್ದಾನೆ ಹತ್ತು ವರ್ಷಗಳ ಹಿಂದೆ ಲೋಕೇಶ್ಗೆ ಡಿವೋರ್ಸ್ ನೀಡಿದ ಆಕೆ, ಆನಂತರ ರಿಯಲ್ ಎಸ್ಟೇಟ್ ಏಜೆಂಟ್ ಶ್ರೀಕಾಂತ್ ಜತೆ ಸ್ನೇಹ ಮಾಡಿದಳು. ಏಳು ವರ್ಷಗಳು ಶ್ರೀಕಾಂತ್ ಜತೆ ಲಿವಿಂಗ್ ಟುಗೆದರ್ನಲ್ಲಿದ್ದ ಆಕೆ, ಮೂರು ವರ್ಷಗಳ ಹಿಂದೆ ಆತನಿಂದ ಕೂಡಾ ದೂರವಾಗಿ ಅರುಣ್ ಸಖ್ಯ ಬೆಳೆಸಿದ್ದಳು. ಆದರೆ, ಇತ್ತೀಚಿಗೆ ಮಾಜಿ ಗೆಳತಿಗೆ ರಾತ್ರಿ ವೇಳೆ ವಾಟ್ಸಾಪ್ಗೆ ಮೆಸೇಜ್ ಕಳುಹಿಸಿ ಮತ್ತೆ ಶ್ರೀಕಾಂತ್ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದ. ಇದಕ್ಕೆ ಸಂಗೀತಾ ಆಕ್ಷೇಪ ವ್ಯಕ್ತಪಡಿಸಿದ್ದಳು. ಹೀಗಿದ್ದರೂ ಆಕೆಗೆ ಶ್ರೀಕಾಂತ್ ಮೆಸೇಜ್ ಮಾಡಿ ಕಿರಿಕಿರಿ ಕೊಡುತ್ತಿದ್ದ ಎನ್ನಲಾಗಿದೆ.
ಈ ವಿಚಾರ ತಿಳಿದು ಕೆಂಡಮಂಡಲನಾದ ಅರುಣ್, ಶ್ರೀಕಾಂತ್ ಕೊಲೆಗೆ ನಿರ್ಧರಿಸಿದ್ದ. ಈ ಕೃತ್ಯಕ್ಕೆ ಆತನಿಗೆ ರೌಡಿ ಕಾರ್ತಿಕ್ ಸಾಥ್ ಕೊಟ್ಟಿದ್ದಾನೆ. ಅಂತೆಯೇ ನಾಗರಬಾವಿ ಸಮೀಪ ಶ್ರೀಕಾಂತ್ನನ್ನು ಅಪಹರಿಸಿದ ಆರೋಪಿಗಳು, ಬಳಿಕ ಆತನನ್ನು ಕೆಂಗೇರಿ ಸಮೀಪ ಗ್ಯಾರೇಜ್ವೊಂದಕ್ಕೆ ಕರೆದೊಯ್ದು ಕೂಡಿಹಾಕಿದರು. ಅಲ್ಲಿ ಆತನಿಗೆ ಮನಬಂದಂತೆ ಥಳಿಸಿ, ಲಾಂಗ್ ತೋರಿಸಿ ಜೀವ ಬೆದರಿಕೆ ಹಾಕಿ ಟಾರ್ಚರ್ ಕೊಟ್ಟಿದ್ದಾರೆ. ಕೊನೆಗೆ ಅರುಣ್ ಕಾಲಿಗೆ ಬಿದ್ದ ಶ್ರೀಕಾಂತ್ ಕ್ಷಮೆಕೋರಿದ ಬಳಿಕ ಆತನನ್ನು ಬಿಟ್ಟು ಕಳುಹಿಸಿದ್ದರು. ಈ ಘಟನೆ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಸಂತ್ರಸ್ತ ದೂರು ಸಲ್ಲಿಸಿದ.