ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ; ದೇಶದಲ್ಲೇ ಮೊದಲ ಬಾರಿಗೆ ಹೈನುಗಾರರಿಗೆ ಸಹಕಾರ ಬ್ಯಾಂಕ್ ಸ್ಥಾಪನೆ
ದೇಶದಲ್ಲೇ ಮೊದಲ ಬಾರಿಗೆ ಹೈನುಗಾರರಿಗೆ ಸಹಕಾರ ಬ್ಯಾಂಕ್ ಸ್ಥಾಪನೆಗೆ ಸರ್ಕಾರ ಆದೇಶ ಹೊರಡಿಸಿದೆ. ಬಜೆಟ್ನಲ್ಲಿ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಡೇರಿಸಿದ್ದಾರೆ. ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ರಚನೆಗೆ ಒಪ್ಪಿಗೆ ಸೂಚಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23 ನೆ ಸಾಲಿನ ಆಯವ್ಯಯದಲ್ಲಿ ಹೈನುಗಾರಿಕೆ ಚಟುವಟಿಕೆಗಳಿಗೆ ನೆರವಾಗಲು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸುವುದಾಗಿ ಪ್ರಕಟಿಸಿದ್ದರು. ಹೈನುಗಾರಿಕೆ ಚಟುವಟಿಕೆಗಳಿಗೆ ನೆರವಾಗಲು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರ ಈ ಯೋಜನೆಯಡಿ ಪ್ರತಿ ತಾಲೂಕಿಗೆ ಒಂದು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸುವ ಗುರಿ ಹೊಂದಿದೆ. ಜೊತೆಗೆ ಭವಿಷ್ಯದಲ್ಲಿ 20 ಸಾವಿರ ಕೋಟಿ ವಾರ್ಷಿಕ ವಹಿವಾಟು ಗುರಿಯನ್ನು ಹೊಂದಲಾಗಿದೆ.
ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಮೂಲಕ ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ. 1000 ರೂಪಾಯಿ ನೀಡಿ ಹೈನುಗಾರರು ಷೇರು ಪಡೆಯಬಹುದು. ಸರ್ಕಾರದಿಂದ ಬ್ಯಾಂಕಿಗೆ 100 ಕೋಟಿ ರೂಪಾಯಿ ಬಂಡವಾಳ ನೀಡಲಾಗುತ್ತದೆ. ಹಾಲು ಒಕ್ಕೂಟಗಳಿಂದ 260 ಕೋಟಿ ರೂಪಾಯಿ ಬಂಡವಾಳ ತೊಡಗಿಸಲಾಗುತ್ತದೆ. ರಾಜ್ಯದ 24.67 ಲಕ್ಷ ಹಾಲು ಉತ್ಪಾದಕರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.