ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಹಿನ್ನಡೆ | ಹಿರಿಯ ನಾಯಕಿ ಮೋಟಮ್ಮರಿಗೆ ವೇದಿಕೆಯಲ್ಲಿ ಅವಮಾನ ಮಾಡಿದ ಡಿಕೆಶಿ- ವಿಡಿಯೋ ವೈರಲ್
ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಹಿನ್ನಡೆಯಾಗಿದ್ದಕ್ಕೆ, ಹಿರಿಯ ನಾಯಕಿ ಮೋಟಮ್ಮರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದ ‘ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ’ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಕೆಶಿ ಗರಂ ಆಗಿದ್ದಾರೆ. ಚಿಕ್ಕಮಗಳೂರಿನ ಕಾಂಗ್ರೆಸ್ ನಾಯಕರು ಮತ್ತು ಮುಖಂಡರನ್ನು ಡಿಕೆಶಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೂಡಿಗೆರೆಯಲ್ಲೂ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಕಳಪೆ ಸಾಧನೆ ಹಿನ್ನೆಲೆ ಸಭೆಯಲ್ಲಿಯೇ ಮೋಟಮ್ಮ ವಿರುದ್ಧ ಡಿಕೆಶಿ ಗರಂ ಆಗಿದ್ದಾರೆ. ಮೋಟಮ್ಮ ವಿರುದ್ಧ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅಭಿಯಾನದ ಬಗ್ಗೆ ಸಮಾಜಾಯಿಷಿ ನೀಡಲು ಕಾರಿನ ಬಳಿ ಬಂದು ಕ್ಷಮೆ ಕೇಳಿದ ಮೋಟಮ್ಮರಿಗೆ ಡಿಕೆಶಿ ನೋ… ನೋ.. ಸಾರಿ… ಮಾತನಾಡಬೇಡಿ. ಮೊದಲು ಮೆಂಬರ್ ಶಿಪ್ ಅಂತಾ ಹೇಳಿ ಡಿಕೆಶಿ ಕಾರು ಹತ್ತಿ ಹೊರಟುಹೋಗಿದ್ದಾರೆ. ನೂರಾರು ಜನರ ಮಧ್ಯೆಯೇ ಹಿರಿಯ ನಾಯಕಿ ಮೋಟಮ್ಮಗೆ ಪ್ರತಿಕ್ರಿಯೆ ನೀಡದೆ ಡಿಕೆಶಿ ಹೊರಟು ಹೋಗಿದ್ದು ಅವಮಾನ ಮಾಡಿದಂತಾಗಿದೆ.
ಸಭೆ ವೇಳೆ ಮಾತನಾಡಿದ ಮೋಟಮ್ಮ ಪುತ್ರಿ ನಯನಾ ಮೋಟಮ್ಮ, ‘ನನಗೆ ಜವಾಬ್ದಾರಿ ವಹಿಸಿದ್ದರೆ ಸದಸ್ಯತ್ವ ನೋಂದಣಿ ಮಾಡಿಸುತ್ತಿದ್ದೆ’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ‘ನಿಮ್ಮ ತಾಯಿಯನ್ನು ಎಂಎಲ್ ಎ ಮಾಡಿದ್ದೇವೆ, ಎಂಎಲ್ಸಿ ಮಾಡಿದ್ದೇವೆ. ಹೀಗಿದ್ರೂ ಹಂಗೂ ಇಲ್ಲ ಹಿಂಗೂ ಇಲ್ಲ ಅಂದ್ರೆ ಯಾರು ಕೇಳ್ತಾರೆ?’ ಎಂದು ಮೋಟಮ್ಮ ಪುತ್ರಿಗೆ ಡಿಕೆಶಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಮ್ಮ ಪಕ್ಷಕ್ಕೆ ಸದಸ್ಯತ್ವ ನೋಂದಣಿಯೇ ಆಧಾರಸ್ತಂಭ. ನಿಮ್ಮ ಕಳಪೆ ಸಾಧನೆಯಿಂದ ನನಗೆ ದುಃಖದ ಜೊತೆಗೆ ನೋವು ಆಗುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಿಗೂ ಡಿಕೆಶಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ಬಗ್ಗೆ ನನಗೆ ನಂಬಿಕೆ ಇತ್ತು, ಆದರೆ ನೀವು ನಂಬಿಕೆ ಕಳೆದುಕೊಂಡು ಬಿಟ್ರಿ. ಚಿಕ್ಕಮಗಳೂರಿನ ಜನರು ವಿದ್ಯಾವಂತರು, ಬುದ್ಧಿವಂತರಿದ್ದಾರೆ. ಆದರೆ ನಿಮಗೆ ಏಕೆ ಸದಸ್ಯತ್ವ ನೋಂದಣಿ ಮಾಡಿಸೋಕೆ ಆಗುತ್ತಿಲ್ಲವೆಂದು ಶೃಂಗೇರಿ ಶಾಸಕ ರಾಜೇಗೌಡ ವಿರುದ್ಧವೂ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.