ಮಂಗಳೂರು : ಮಗು ಅದಲು ಬದಲು ಪ್ರಕರಣ : ದೂರುದಾರರೇ ಮಗುವಿನ ನಿಜವಾದ ತಂದೆ | ಡಿಎನ್ ಎ ವರದಿ ಬಹಿರಂಗ

ಮಂಗಳೂರು : ನಗರದ ಲೇಡಿಗೋಶನ್ ಸರಕಾರಿ ಆಸ್ಪತ್ರೆಯಲ್ಲಿ ‘ಮಗು ಅದಲು ಬದಲು’ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಪ್ರಯೋಗಾಲಯದಲ್ಲಿ ನಡೆಸಲಾಗಿದ್ದ ಡಿಎನ್ಎ ಪರೀಕ್ಷೆಯ ವರದಿಯು ತನಿಖಾಧಿಕಾರಿಯ ಕೈ ಸೇರಿದ್ದು, ದೂರುದಾರರಾದ ಮುಸ್ತಫಾ ಅವರೇ ಮಗುವಿನ ತಂದೆ ಎಂಬುದನ್ನು ವರದಿ ಖಚಿತಪಡಿಸಿದೆ.

 

ವರ್ಷದ ಹಿಂದೆ ನಗರದ ಲೇಡಿಗೋಷನ್ ಆಸ್ಪತ್ರೆಯ ವಿರುದ್ಧ ಪ್ರಕರಣ ಒಂದು ದಾಖಲಾಗಿತ್ತು. ‘ಮಗು ಅದಲು-ಬದಲು’ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಜನಿಸಿದ ಆರೋಗ್ಯವಂತ ಹೆಣ್ಣು ಮಗುವನ್ನು ನೀಡದೆ ಆಸ್ಪತ್ರೆಯ ಸಿಬ್ಬಂದಿ ಅನಾರೋಗ್ಯ ಪೀಡಿತ ಗಂಡು ಮಗುವನ್ನು ನೀಡಿದ್ದಾರೆ ಎಂಬುದಾಗಿ ಮುಸ್ತಾಫಾ ಅವರು ಆರೋಪಿಸಿದ್ದರು. ಹಾಗೂ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡಾ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಪ್ರಯೋಗಾಲಯದಲ್ಲಿ ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು. ಇದೀಗ ಈ ತನಿಖಾ ವರದಿ ತನಿಖಾಧಿಕಾರಿಯ ಕೈಸೇರಿದ್ದು, ದೂರುದಾರರಾದ ಮುಸ್ತಫಾ ಅವರೇ ಗಂಡು ಮಗುವಿನ ತಂದೆ ಎಂಬುದನ್ನು ವರದಿ ಖಚಿತಪಡಿಸಿದೆ’ ಎಂದು ಉತ್ತರ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

ಈ ವರದಿಯ ಆಧಾರದಲ್ಲಿ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆ ಹಿನ್ನೆಲೆ : 2021ರ ಸೆಪ್ಟೆಂಬರ್ 27ರಂದು ಮುಸ್ತಫಾ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿಯ ತಪ್ಪಿನಿಂದಾಗಿ, ಜನ್ಮ ದಾಖಲೆಯ ಲಿಂಗ ಕಾಲಂನಲ್ಲಿ ‘ಗಂಡು ಮಗು’ ಬದಲು ‘ಹೆಣ್ಣು ಮಗು’ ಎಂಬುದಾಗಿ ಬರೆಯಲಾಗಿತ್ತು. ಮಗುವಿನ ತೂಕ ಕೇವಲ 1.4 ಕೆ.ಜಿ. ಯಷ್ಟಿತ್ತು. ಅಲ್ಲದೆ, ಮಗುವಿನಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿದ್ದರಿಂದ ಕೂಡಲೇ ಅದನ್ನು ನವಜಾತ ಶಿಶುಗಳ ತೀವ್ರನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ದಾಖಲೆಯಲ್ಲಿ ಹೆಣ್ಣು ಮಗು ಇದ್ದು, ಕೈಗೆ ಗಂಡು ಮಗುವನ್ನು ನೀಡಿದ್ದಾರೆ ಎಂದು ಆರೋಪಿಸಿ ಮುಸ್ತಫಾ ಅವರು ಆಸ್ಪತ್ರೆಯ ವಿರುದ್ಧ ಉತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮುಸ್ತಫಾ ಅವರು ನೀಡಿದ ದೂರಿನ ಆಧಾರದಲ್ಲಿ ಮಗುವಿನ ಡಿಎನ್ಎ ಪರೀಕ್ಷೆ ನಡೆಸಲು ನ್ಯಾಯಾಲಯವೂ ಒಪ್ಪಿಗೆ ಸೂಚಿಸಿತ್ತು.

ಈಗ ಇದರ ವರದಿ ಬಂದಿದ್ದು ಮುಸ್ತಫಾ ಅವರೇ ಗಂಡು ಮಗುವಿನ ತಂದೆ ಎಂದು ಸಾಬೀತಾಗಿದೆ.

Leave A Reply

Your email address will not be published.