ಇಡೀ ರಾಜ್ಯದಲ್ಲಿಂದು “ಜೇಮ್ಸ್” ಜಾತ್ರೆ !! | 47 ನೇ ಹುಟ್ಟುಹಬ್ಬದಂದೇ ಅಪ್ಪು ಅಭಿನಯದ ಕೊನೆಯ ಸಿನಿಮಾ ಬಿಡುಗಡೆ
ಅಭಿಮಾನಿಗಳ ಪಾಲಿನ ಅಪ್ಪು, ಪವರ್ ಸ್ಟಾರ್, ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ 47ನೇ ಹುಟ್ಟುಹಬ್ಬ ಇಂದು. ಅವರ ಅಗಲುವಿಕೆಯ ನೋವಿನಲ್ಲಿ ಕರ್ನಾಟಕದಾದ್ಯಂತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಮನತುಂಬಿ ಆಚರಿಸುತ್ತಿದ್ದಾರೆ.
ಪುನೀತ್ ಅಭಿಮಾನಿಗಳಿಗೆ ಇಂದು ಡಬಲ್ ಸಂಭ್ರಮ. ಒಂದೆಡೆ ಪುನೀತ್ ರಾಜ್ ಕುಮಾರ್ ಬರ್ತ್ ಡೇ, ಮತ್ತೊಂದೆಡೆ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಿದೆ. ಅದರ ನಡುವೆಯೇ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮ ಜೊತೆ ಇಲ್ಲ ನೋವು ಅಭಿಮಾನಿಗಳ ಹೃದಯವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಜೇಮ್ಸ್ ಸಿನಿಮಾ ನೋಡಿ ಕಣ್ತುಂಬಿ ಕೊಂಡ ಅಭಿಮಾನಿಗಳು ಅಪ್ಪು ಅಭಿನಯಕ್ಕೆ ಚಪ್ಪಾಳೆ ತಟ್ಟಿದ್ದಾರೆ, ಶಿಳ್ಳೆ ಹೊಡೆದಿದ್ದಾರೆ, ಅವರನ್ನು ಮಿಸ್ ಮಾಡಿಕೊಂಡು ಕಣ್ಣೀರು ಇಟ್ಟಿದ್ದಾರೆ.
ಚಿತ್ರಮಂದಿರಗಳ ಮುಂದೆ ಪುನೀತ್ ರಾಜ್ ಕುಮಾರ್ ಅವರ ಬೃಹತ್ ಕಟೌಟ್ ಗಳು ರಾರಾಜಿಸುತ್ತಿವೆ. ಅಭಿಮಾನಿಗಳು ಕಟೌಟ್, ಭಾವಚಿತ್ರಗಳಿಗೆ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಹಾಲಿನ ಅಭಿಷೇಕ ಮಾಡಿ, ಮೇಲಿನಿಂದ ಪುಷ್ಪಗಳ ಸುರಿಮಳೆಗೈದು, ಬಣ್ಣದ ಕಾಗದಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ.
ಬೆಂಗಳೂರಿನು ವೀರೇಶ್ ಚಿತ್ರಮಂದಿರದಲ್ಲಿ ಹಿರಿಯ ಅಜ್ಜಿಯೊಬ್ಬರು ಜೇಮ್ಸ್ ಸಿನಿಮಾ ನೋಡಿದ್ರು, ಮೊದಲ ಷೋ ನೋಡಬೇಕೆಂಬ ಆಸೆಯಿಂದ ಕುಟುಂಬದ ಮಹಿಳಾ ಸದಸ್ಯರ ಜೊತೆ ಆಗಮಿಸಿದ ಹಿರಿಯಜ್ಜಿ, ಸಿನಿಮಾ ನೋಡಿದ ಬಳಿಕ ಅಪ್ಪು ನೆನೆದು ಕಣ್ಣೀರು ಹಾಕಿದ್ರು. ಇಂತಹ ಅಭಿಮಾನಿಗಳ ಸಂಖ್ಯೆ ಇಂದು ಹೆಚ್ಚಾಗೇ ಕಾಣುತ್ತಿತ್ತು. ಅಭಿಮಾನಿಗಳ ಜೊತೆ ಅನೇಕ ಚಿತ್ರ ಕಲಾವಿದರು ಇಂದು ಚಿತ್ರ ವೀಕ್ಷಿಸಲಿದ್ದಾರೆ. ಪುನೀತ್ ಅವರ ಸೋದರ ರಾಘವೇಂದ್ರ ರಾಜ್ ಕುಮಾರ್ ತಮ್ಮ ಪತ್ನಿ ಜೊತೆ ಬೆಳಗ್ಗೆಯೇ ಆಗಮಿಸಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ್ದಾರೆ.
ಹಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಸಾಲುಸಾಲು ಸೀಟುಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಚಿತ್ರಮಂದಿರಗಳ ಬಳಿ ಜೇಮ್ಸ್ ವೀಕ್ಷಿಸಿದವರಿಗೆ ಬಿರಿಯಾನಿ, ಸ್ವೀಟ್ ಹಂಚಲಾಗುತ್ತಿದೆ.
ಅಪ್ಪು ಸಮಾಧಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಭೇಟಿ ನೀಡಿ ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಿದರು. ಇದೇ ವೇಳೆ ವರನಟ ಡಾ. ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಅವರ ಸಮಾಧಿಯ ದರ್ಶನವನ್ನು ಸಹ ಪಡೆದರು. ಕುಟುಂಬಸ್ಥರು ಅಪ್ಪು ಸಮಾಧಿ ಬಳಿ ಕೇಕ್ ಕತ್ತರಿಸಿದ್ದಾರೆ. `ಆಕಾಶ’ ನೋಡಿ ಅಪ್ಪುಗೆ ರಾಘಣ್ಣ ವಿಶ್ ಮಾಡಿದ್ದಾರೆ. ಅಲ್ಲದೆ ಇವತ್ತು ನಿಮ್ಮಲ್ಲಿ ಕೋಟ್ಯಂತರ ಅಪ್ಪು ಕಾಣ್ತಿದ್ದಾನೆ. ಅಪ್ಪು ಆಸೆಯಂತೆ ಬರ್ತ್ ಡೇ ದಿನವೇ ಚಿತ್ರ ರಿಲೀಸ್ ಆಗುತ್ತಿದೆ ಎಂದು ಕಂಠೀರವ ಸ್ಟುಡಿಯೋ ಬಳಿ ಹೇಳಿದರು.
ಅದಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 47ನೇ ಜಯಂತಿ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಒಟ್ಟಾರೆ ಅಪ್ಪು ಹುಟ್ಟುಹಬ್ಬವನ್ನು ಕರುನಾಡಿನ ಜನತೆ ಹಬ್ಬದಂತೆ ಆಚರಿಸುತ್ತಿದ್ದಾರೆ.