ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು ಹಿನ್ನೆಲೆ | ಆಯಾ ರಾಜ್ಯಗಳ ಅಧ್ಯಕ್ಷರನ್ನು ವಜಾಗೊಳಿಸಿದ ಕಾಂಗ್ರೆಸ್
ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಸೋಲನ್ನು ಕಂಡಿರುವ ಹಿನ್ನಲೆಯಲ್ಲಿ ಇದೀಗ ಆಯಾ ರಾಜ್ಯಗಳ ಅಧ್ಯಕ್ಷರಿಗೆ ಗೇಟ್ ಪಾಸ್ ನೀಡುವ ಸಿದ್ಧತೆಯಲ್ಲಿ ಕಾಂಗ್ರೆಸ್ ಇದೆ. ಹೌದು. ಆಯಾ ರಾಜ್ಯಗಳ ಪಕ್ಷದ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶಿಸಿದ್ದಾರೆ.
ಈಗ ಈ ವಿಷಯವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ, “ಪಕ್ಷದ ಮರುಸಂಘಟನೆಗೆ ಅನುಕೂಲವಾಗುವಂತೆ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದ ಪಿಸಿಸಿ ಅಧ್ಯಕ್ಷರು ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಹೇಳಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚಿಗೆ ನಡೆದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಉತ್ತರ ಪ್ರದೇಶದಲ್ಲಿ ಪಕ್ಷವು ಕೇವಲ 2 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿತ್ತು.
ಇನ್ನೊಂದೆಡೆಗೆ ಪಂಜಾಬ್ ನಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷವು ತೀವ್ರ ಆಂತರಿಕ ಸಂಘರ್ಷದಿಂದಾಗಿ ಹೀನಾಯ ಸೋಲನ್ನು ಅನುಭವಿಸಿತು. ಅಷ್ಟೇ ಅಲ್ಲದೆ ಪಕ್ಷದ ಘಟಾನುಘಟಿ ನಾಯಕರುಗಳು ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರು.