ಹಿಜಾಬ್ ವಿವಾದ ಪ್ರಕರಣ : ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗ ಅಲ್ಲ | ಸರಕಾರದ ಆದೇಶ ಕಾನೂನು ಬದ್ಧ ಎಂದ ಹೈಕೋರ್ಟ್ ತ್ರಿಸದಸ್ಯ ಪೀಠ
ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಸುದ್ದಿಯಾಗಿ ವಿಶ್ವದ ಗಮನ ಸೆಳೆದ ಹಿಜಾಬ್ ವಿವಾದ ಭಾರೀ ಕೋಲಾಹಲವನ್ನೇ ಸೃಷ್ಟಿ ಮಾಡಿದ್ದು. ಈಗ ಅಂತಿಮ ಘಟ್ಟ ತಲುಪಿದೆ.
ಈ ವರ್ಷದ ಆರಂಭದಲ್ಲಿ ಕರ್ನಾಟಕದ ಉಡುಪಿಯಲ್ಲಿ ಆರಂಭವಾಗಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದಂತಹ ಹಿಜಾಬ್ ನಿಷೇಧ ಪ್ರಕರಣ ಈಗ ಅಂತಿಮ ಹಂತಕ್ಕೆ ತಲುಪಿದೆ. ಹಿಜಾಬ್ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (ಇಂದು) ಬುಧವಾರ
ತನ್ನ ತೀರ್ಪು ಪ್ರಕಟಿಸಿದೆ.
ವಿದ್ಯಾರ್ಥಿನಿಯರು ಹಿಜಾಬ್ ಹಾಕಿ ಶಾಲೆಗೆ ಬರುವ ವಿಚಾರವನ್ನು ಪ್ರಶ್ನಿಸಿ ಉಡುಪಿಯ ವಿದ್ಯಾರ್ಥಿಗಳ ಗುಂಪೊಂದು ನ್ಯಾಯಾಲಯದ ಮೊರೆ ಹೋಗಿತ್ತು. ಈ ಕುರಿತಂತೆ 12 ದಿನಗಳ ಕಾಲ ವಿಚಾರಣೆ ನಡೆಸಿದ ಹೈಕೋರ್ಟ್ ನ ಪೂರ್ಣಪೀಠ ಫೆಬ್ರವರಿ 25 ರಂದು ಶುಕ್ರವಾರ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರನ್ನು ಒಳಗೊಂಡ ಪೂರ್ಣ ಪೀಠ ವಿಚಾರಣೆ ಪೂರ್ಣಗೊಳಿಸಿತ್ತು
ಹೈಕೋರ್ಟ್ ಮಹತ್ವದ ಆದೇಶವನ್ನು ಇಂದು ನೀಡಿದೆ. ಅದೇನೆಂದರೆ ಹಿಜಾಬ್ ಇಸ್ಲಾಂ ನ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ಕಡ್ಡಾಯಗೊಳಿಸಲು ಸರಕಾರಕ್ಜೆ ಸಂಪೂರ್ಣ ಅಧಿಕಾರವಿದೆ. ಸರಕಾರದ ವಸ್ತ್ರಸಂಹಿತೆಯನ್ನು ಪ್ರಶ್ನಿಸುವ ಅಧಿಕಾರ ವಿದ್ಯಾರ್ಥಿಗಳಿಗಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಎಲ್ಲಾ ವಿದ್ಯಾರ್ಥಿಗಳು ಹೈಕೋರ್ಟ್ ತೀರ್ಪನ್ನು ಪಾಲಿಸಿ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಪರೀಕ್ಷೆಗಳಿಗೆ ಗೈರಾಗದಂತೆ ಸಿಎಂ ಬೊಮ್ಮಾಯಿಯವರು ಹೈಕೋರ್ಟ್ ತೀರ್ಪಿನ ಬಳಿಕ ಮನವಿ ಮಾಡಿಕೊಂಡಿದ್ದಾರೆ.