ರಸ್ತೆ ಗುಂಡಿಗೆ ಯುವಕ ಬಲಿ | ಮನೆಗೆ ಆಧಾರಸ್ತಂಭವಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅಮ್ಮನ ರೋಧನೆ ಹೇಳತೀರದು
ಬೆಂಗಳೂರು: ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ಬಳಿ ರಸ್ತೆಗುಂಡಿಗೆ ಬಲಿಯಾದ ಯುವಕ ಅಶ್ವಿನ್ರ ತಾಯಿ ವಸುಧಾ ಅವರ ರೋಧನೆಯ ನೋವು ಹೇಳತೀರದು. ಬಿಬಿಎಂಪಿಯ ಭ್ರಷ್ಟತನಕ್ಕೆ ತನ್ನ ಮಗನ ಜೀವ ಹೋಗಿದ್ದಕ್ಕೆ ಕಣ್ಣೀರಿಡುತ್ತಿದ್ದಾರೆ.
ಯಾವ ತಾಯಿಗೂ ಈ ನೋವು ಬೇಡ, ಅವನ ದುಡಿಮೆಯಿಂದಲೇ ಈ ಸಂಸಾರ ನಡೀತಿತ್ತು. ನಾನಿವಾಗ ಯಾರಿಗೋಸ್ಕರ ಬದುಕಬೇಕು? ಅಯ್ಯೋ ಕಂದ ಇಷ್ಟು ಚಿಕ್ಕ ವಯಸ್ಸಿಗೇ ಹೋಗಿಬಿಟ್ಯಲ್ಲಪ್ಪಾ… ಎಂದು ಕಣ್ಣೀರಿಡುತ್ತಿರುವ ತಾಯಿಯ ಗೋಳಾಟ ನೋಡಲು ಸಾಧ್ಯವಾಗುತ್ತಿಲ್ಲ. ಬಿಡಬ್ಲ್ಯು ಎಸ್ಬಿ ಅವರು ರಸ್ತೆಬದಿ ಅಗೆದಿದ್ದ ಗುಂಡಿಗೆ ಬಿದ್ದ ಅಶ್ವಿನ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
27 ವರ್ಷದ ಅಶ್ವಿನ್, ಹಾವೇರಿ ಮೂಲದವನು. ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ. ಭಾನುವಾರ ರಾತ್ರಿ ಬೈಕ್ನಲ್ಲಿ ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ಕಡೆ ಹೋಗುವಾಗ ರಸ್ತೆಗುಂಡಿಯಲ್ಲಿ ಬಿದ್ದು ತೀವ್ರಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಸೋಮವಾರ ಮುಂಜಾನೆ ಕೊನೆಯುಸಿರೆಳೆದರು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅಶ್ವಿನ್ ಎಲ್ಲರೂ ಬಿಟ್ಟು ಹೋಗಿದ್ದ.
ಅಶ್ವಿನ್ರ ಸ್ನೇಹಿತರು, ಸ್ಥಳೀಯರು ಬಿಬಿಎಂಪಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಾ ಇದಕ್ಕೆಲ್ಲಾ ಅಧಿಕಾರಿಗಳೇ ಹೊಣೆ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.