ಪ್ರತಿಯೊಬ್ಬ ದೇಶಭಕ್ತನೂ ನೋಡಲೇಬೇಕಾದ ಸಿನಿಮಾವಿದು !! | ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ದೌರ್ಜನ್ಯಗಳ ಕರಾಳ ಮುಖ ತೆರೆದಿಡುತ್ತದೆ “ದಿ ಕಾಶ್ಮೀರ್ ಫೈಲ್ಸ್”
ದೇಶದ ಪ್ರತಿಯೊಬ್ಬ ಪ್ರಜೆಯೂ ನೋಡಲೇಬೇಕಾದ ಸಿನಿಮಾವಿದು. ಈ ಚಿತ್ರ ನೋಡುತ್ತಿದ್ದರೆ ಅವನು ನಿಜವಾದ ದೇಶಭಕ್ತನೇ ಆಗಿದ್ದಲ್ಲಿ ಆತನ ರಕ್ತ ಖಂಡಿತವಾಗಿಯೂ ಕುದಿಯುತ್ತದೆ ಮತ್ತು ಅಷ್ಟೇ ನೋವು ಹೊರಬರುತ್ತದೆ. ಅಂತಹ ಚಿತ್ರ ಇದೀಗ ದೇಶದಲ್ಲೆಡೆ ಜನಪ್ರಿಯವಾಗುತ್ತಿದೆ. ಹೌದು. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ಭಯೋತ್ಪಾದನೆ, ದೌರ್ಜನ್ಯಗಳ ಕರಾಳ ಮುಖವನ್ನು ಬಿಚ್ಚಿಡುವ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗತೊಡಗಿದೆ.
ಸ್ವತಃ ಪ್ರಧಾನಿ ನರೇಂದ್ರ ಮೋದಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ಗಣ್ಯರು ಸೇರಿದಂತೆ ಸೆಲೆಬ್ರಿಟಿಗಳು ಕೂಡ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯಪ್ರದೇಶ, ಗುಜರಾತ್ ಗಳು ತೆರಿಗೆ ವಿನಾಯಿತಿ ಘೋಷಣೆ ಮಾಡಿವೆ. ಆ ಸಾಲಿಗೆ ಕರ್ನಾಟಕವು ಕೂಡ ಸೇರಿದೆ.
ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯೆ ಮತ್ತು ಅವರ ವಲಸೆ ಕುರಿತ ನೈಜ ಘಟನೆಗಳ ಆಧಾರಿತವಾಗಿರುವ ಈ ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಸೇರಿ ಹಲವರು ಅಭಿನಯಿಸಿದ್ದಾರೆ. ಮಾ.11ರಂದು ಬಿಡುಗಡೆಯಾದ ಮೊದಲ ದಿನ ಚಿತ್ರ 3.55 ಕೋಟಿ ರೂ. ಗಳಿಕೆ ಮಾಡಿತ್ತು.
ಕಾಶ್ಮೀರ ಎಂಬ ಆಗಿನ ಹಿಂದೂ ಪಂಡಿತರ ನರಕ ಕೂಪ:
ನಮ್ಮ ಮಾತೃಭೂಮಿಯ ಇತಿಹಾಸದ ವಿನಾಶದ ಮೂಲಕ ಪ್ರತಿಯೊಬ್ಬ ಹಿಂದೂವಿನ ಕರುಳು ಹಿಂಡುವ ಕಥೆಯಿದು. ಸ್ವರ್ಗ, ಜ್ಞಾನದ ಚಿಲುಮೆ, ಶತಮಾನಗಳಿಂದ ಶ್ರೇಷ್ಠ ಮತ್ತು ಜ್ಞಾನಿಗಳ ತವರು, ಭೂಮಿಯ ಮೇಲಿನ ಸ್ವರ್ಗ ಎಂದೆಲ್ಲ ಕರೆಸಿಕೊಂಡ ಕಾಶ್ಮೀರ ನರಕ ಕೂಪವಾಯಿತು. ಸಾಮರಸ್ಯದಿಂದ ಅಸ್ತಿತ್ವದಲ್ಲಿರುವ ಸಮುದಾಯಗಳು ಪರಸ್ಪರ ತಿರುಗಿಬಿದ್ದು ಕಾಶ್ಮೀರವನ್ನು ಸಾಮೂಹಿಕ ಸಮಾಧಿಯಾಗಿ ಮಾರ್ಪಾಟು ಮಾಡಿದವು. ಕಾಶ್ಮೀರದಲ್ಲಿ ನಡೆದ ದೌರ್ಜನ್ಯಗಳು ಇಂದಿಗೂ ಭೂಮಿಯನ್ನು ಕಾಡುತ್ತಿವೆ. ಬದುಕುಳಿದ ಅದೃಷ್ಟವಂತರು ಸುರಿಸಿದ ಮೌನದ ಕಣ್ಣೀರಿನಲ್ಲಿ ಕಳೆದುಹೋದ ಎಲ್ಲಾ ಆತ್ಮಗಳ ಅಸಹಾಯಕ ಕಿರುಚಾಟಗಳು ಪ್ರತಿಧ್ವನಿಸುತ್ತವೆ.
ಏಕೆ ಹೀಗೆ?? ಏಕೆಂದರೆ ಕೆಲವು ವಕ್ರ ಮನಸ್ಸುಗಳು ವಿನಾಶವನ್ನು ಸೃಷ್ಟಿಸಲು ನಿರ್ಧರಿಸಿದವು. ಇನ್ನೂ ಅದನ್ನು ಮುಂದುವರೆಸುತ್ತಿವೆ. ಕಾಶ್ಮೀರಿ ಪಂಡಿತರು ಏಕೆ ಮೌನವಾಗಿದ್ದರು? ಎಂಬುದು ನಮ್ಮಲ್ಲಿ ಉಳಿದುಕೊಂಡ ಒಂದು ಬಹುದೊಡ್ಡ ಪ್ರಶ್ನೆ. ನಮ್ಮ ಅಜ್ಞಾನದಿಂದಾಗಿ ಕಾಶ್ಮೀರಿ ಪಂಡಿತರು ಎಷ್ಟು ಬೆಲೆ ತೆತ್ತಿದ್ದಾರೆ ಎಂದು ಯೋಚಿಸಲು ಕೂಡಾ ಭಯವಾಗುತ್ತದೆ ಈ ಚಿತ್ರ ನೋಡಿದ ಮೇಲೆ.
ಆದರೆ ಇಂತಹ ಘನಘೋರ ಸತ್ಯವನ್ನು ಬೆಳಕಿಗೆ ತಂದಿದ್ದಕ್ಕಾಗಿ ವಿವೇಕ್ ಅಗ್ನಿಹೋತ್ರಿ ಅವರಿಗೆ ಶತಕೋಟಿ ಧನ್ಯವಾದಗಳು. ನಾವೆಲ್ಲರೂ ಛಲಬಿಡದೆ ಒಟ್ಟಾಗಿ ನಿಂತು ನಮ್ಮ ಹಿಂದೂಸ್ಥಾನದ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಹೇಳೋಣ. ಮಾನವ ಜೀವನ, ಚೈತನ್ಯ ಮತ್ತು ಪ್ರಯತ್ನದ ಈ ಅಸಾಮಾನ್ಯ ಕಥೆಯನ್ನು ಈ ಮಹಾನ್ ದೇಶದ ಪ್ರತಿಯೊಬ್ಬ ಪ್ರಜೆಯೂ ನೋಡಲೇಬೇಕು. ಇಂತಹ ಚಿತ್ರವನ್ನು ಕೆಚ್ಚೆದೆಯಿಂದ ನಿರ್ದೇಶಿಸಿದ ವಿವೇಕ್ ಅಗ್ನಿಹೋತ್ರಿ ಗೆ ದೊಡ್ಡ ಸಲಾಂ.