ವ್ಯಕ್ತಿ ಸಹಿತ ಸುಟ್ಟು ಕರಕಲಾದ ಕಾರು !!

ವ್ಯಕ್ತಿ ಸಹಿತ ಕಾರು ಸುಟ್ಟು ಕರಕಲಾಗಿರುವ ಘಟನೆ ನಿನ್ನೆ ತಡರಾತ್ರಿ ಬೆಂಗಳೂರು ನಗರದ ನೈಸ್ ರಸ್ತೆಯಲ್ಲಿ ನಡೆದಿದೆ.

 

ನೈಸ್ ರಸ್ತೆಯ ಚನ್ನಸಂದ್ರ ಬ್ರಿಡ್ಜ್ ಬಳಿ ಸುಟ್ಟು ಕರಕಲಾಗಿರುವ ಸ್ಯಾಂಟ್ರೋ ಕಾರ್ ಮತ್ತು ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತ ದುರ್ದೈವಿಯನ್ನು ಕೋಲಾರ ಮೂಲದ ದರ್ಶನ್ (40) ಎಂದು ಗುರುತಿಸಲಾಗಿದೆ.

ಉತ್ತರಹಳ್ಳಿಯಲ್ಲಿ ವಾಸವಾಗಿರುವ ಮೃತ ದರ್ಶನ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ತುಮಕೂರು ರಸ್ತೆ ಬಳಿ ಸಂಬಂಧಿಕರೊಬ್ಬರ ಫಂಕ್ಷನ್‍ಗೆ ಹೋಗಿ ಬರುವುದಾಗಿ ಹೇಳಿ ಸಂಜೆ ಮನೆಯಿಂದ ತೆರಳಿದ್ದರು. ರಾತ್ರಿ 9.50ರ ಸುಮಾರಿಗೆ ದರ್ಶನ್ ಇದ್ದ ಕಾರ್ ಟೋಲ್ ನಿಂದ ಪಾಸ್ ಆಗಿರುವುದು ಕಂಡುಬಂದಿದೆ. ಆ ಬಳಿಕ ಕಾರ್ ಚನ್ನಸಂದ್ರ ಬ್ರಿಡ್ಜ್ ಬಳಿ ಬರುತ್ತಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಸ್ತೆಯ ಎಡ ಬದಿಗೆ ಕಾರ್ ಪಾರ್ಕ್ ಆಗಿದ್ದು, ಸಂಪೂರ್ಣ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಕಾರ್ ಮತ್ತು ಮೃತದೇಹ ಪತ್ತೆಯಾಗಿದೆ.

ಆರ್.ಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಉತ್ತರ ವಿಭಾಗ ಸಂಚಾರ ಡಿಸಿಪಿ ಸವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.