ರಾಜಕಾರಣಿಗಳಿಗೆ ನೀಡುವ ಗನ್ ಮ್ಯಾನ್, ಎಸಿ ಕಾರ್ ರೈತನಿಗೆ ನೀಡಲಿ-ರೈತನೇ ದೇಶದ ನಿಜವಾದ ಹೀರೊ!! ಕೃಷಿ ಸಿರಿ 2022 ಉದ್ದೇಶಿಸಿ ಆಶೀರ್ವದಿಸಿದ ಕೇಮಾರು ಶ್ರೀ
ಸಾಧ್ಯವಾದರೆ ನಮ್ಮ ದುಃಖ ವನ್ನು ಕಡಿಮೆ ಮಾಡಬೇಕು, ಆ ಮೂಲಕ ಇನ್ನೊಬ್ಬರ ಖುಷಿಯನ್ನು ಕಿತ್ತುಕೊಳ್ಳದಂತೆ ವರ್ತಿಸಬೇಕು. ಐ.ಟಿ ಬಿ.ಟಿ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡುವ ಮೂಲಕ ಸಾಕಷ್ಟು ಮುಂದಿರುವ ನಮ್ಮ ಇಂದಿನ ಸಮಾಜದ ಹೊಟ್ಟೆ ತುಂಬಿಸಬೇಕಾದರೆ ಒಂದು ಹಿಡಿ ಅನ್ನ ಬೇಕೇ ಬೇಕು, ಆದರೆ ಅನ್ನ ನೀಡುವ ರೈತನಿಗಿಲ್ಲದ ರಕ್ಷಣೆ ಆಳುವ ರಾಜಕಾರಣಿಗಳಿಗಿದೆ, ಮುಂದೊಂದು ದಿನ ಇವೆಲ್ಲವೂ ದೇಶದ ರೈತನಿಗೆ ದಕ್ಕಬೇಕು ರಾಜ್ಯದಲ್ಲಿ ಕೃಷಿಕರ ಸಂಖ್ಯೆ ಇನ್ನೂ ವೃದ್ಧಿಸುವಂತಾಗಬೇಕು ಎಂದು ಕೇಮಾರು ಈಶ ವಿಠಲದಾಸ ಸ್ವಾಮೀಜಿಗಳು ಹೇಳಿದರು.
ಅವರು ಮೂಲ್ಕಿಯಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಮೇಳ ಕೃಷಿ ಸಿರಿ 2022 ರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಮುಖ್ಯ ಅಥಿತಿಗಳಾಗಿ ಪಾಲ್ಗೊಂಡ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಅವರು ಮಾತನಾಡಿ ಭತ್ತದಿಂದ ನಿರೀಕ್ಷಿತ ಲಾಭ ಪಡೆಯಲು ಸಾಧ್ಯವಾಗದ ಕಾರಣ ಭತ್ತ ಬೆಳೆಯಲು ಬ್ಯಾಂಕ್ ಗಳು ಲೋನ್ ಕೊಡಲು ಮುಂದಾಗುತ್ತಿಲ್ಲ, ವರ್ತಮಾನ ಕಾಲದಲ್ಲಿ ಎಲ್ಲೆಡೆ ಅಡಿಕೆ ಬೆಳೆಗಾರರ ಸಂಖ್ಯೆ ಜಾಸ್ತಿಯಾಗಿದ್ದು ನಿರ್ದಿಷ್ಟ ಲಾಭ ಪಡೆಯುವ ಕಡೆಗೆ ಕೃಷಿಕರು ವಾಲುತ್ತಿದ್ದಾರೆ.ಇದರ ಬಗ್ಗೆ ಸರಕಾರ ಗಮನಹರಿಸಿದರೆ ಇನ್ನಷ್ಟು ಯುವ ಪೀಳಿಗೆ ಕೃಷಿಗೆ ಒತ್ತು ನೀಡಲು ಮುಂದಾಗಬಹುದು ಎಂದು ಅಭಿಪ್ರಾಯ ಪಟ್ಟರು.
ಸಭೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಹಲವರನ್ನು ಸನ್ಮಾನಿಸಿ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.