ಇಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ!! ಉತ್ತರಪ್ರದೇಶದಲ್ಲಿ ಏನಾಗಲಿದೆ ಬಿಜೆಪಿ ಸಮೀಕ್ಷೆ!??
ಇಂದು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಮುಂಬರುವ ರಾಷ್ಟ್ರಪತಿ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿರುವ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ.
ಬೆಳಗ್ಗೆ 8 ಗಂಟೆಗೆ ಮತಎಣಿಕೆ ಆರಂಭವಾಗಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ಉತ್ತರ ಪ್ರದೇಶದಲ್ಲಿ ಮರು ಆಯ್ಕೆ ಬಯಸಿರುವ ಬಿಜೆಪಿ, ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ ವರ್ಚಸ್ಸಿನಡಿ ಮತ ಯಾಚಿಸಿದೆ. ಸಮಾಜವಾದಿ ಪಕ್ಷ ಜಿದ್ದಾಜಿದ್ದಿ ಹೋರಾಟದ ನಡುವೆಯೂ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಜಯಭೇರಿ ಮುನ್ಸೂಚನೆ ನೀಡಿವೆ.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ, ನಂತರದಲ್ಲಿ ಕಾಯ್ದೆ ಹಿಂಪಡೆದ ಬೆನ್ನಲ್ಲೇ ಚುನಾವಣೆ ಎದುರಿಸಿದ ಬಿಜೆಪಿಗೆ, ಕೃಷಿಕರು ಹೆಚ್ಚಿರುವ ಉತ್ತರ ಪ್ರದೇಶದಲ್ಲಿ ಚುನಾವಣೆ ಸವಾಲನ್ನೊಡ್ಡಿದ್ದು ಸುಳ್ಳಲ್ಲ. ಆದರೂ, ಕಾನೂನು ವ್ಯವಸ್ಥೆ ಸುಧಾರಣೆ, ಕೊರೊನಾ ಸಂಕಷ್ಟದಲ್ಲಿ ನೆರವಾಗಿರುವುದು, ಪಿಎಂ ಆವಾಸ್ ಯೋಜನೆಯಲ್ಲಿ ಮನೆ ಕಟ್ಟಲು ಹಣ, ಸೇರಿದಂತೆ ಹತ್ತು ಹಲವು ಅಭಿವೃದ್ಧಿಪರ ಕಾರ್ಯ ಬಿಜೆಪಿಗೆ ಮತಲಾಭ ತಂದುಕೊಡುವ ನಿರೀಕ್ಷೆಯಿದೆ.