ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿದ ಅಧಿಕಾರಿಗಳ ಮೇಲೆ ದರ್ಪ!! ನಾಲ್ವರ ವಿರುದ್ಧ ಪ್ರಕರಣ ದಾಖಲು-ಕಳ್ಳರು ಖ್ಯಾತ ರಾಜಕಾರಣಿಯೊಬ್ಬರ ಬಲಗೈ ಬಂಟರಂತೆ
ಮಂಗಳೂರು: ಮಂಗಳೂರು ನಗರದ ಫೈಸಲ್ ನಗರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ ತಂಡವೊಂದು ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಸಂದರ್ಭ ಸ್ಥಳದಲ್ಲಿದ್ದ ನಾಲ್ಕು ಮಂದಿ ಯುವಕರು ಅಧಿಕಾರಿಗಳನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಅಕ್ರಮ ಮರಳುಗಾರಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದೂ, ಇದಕ್ಕೆ ಕೆಲ ರಾಜಕಾರಣಿಗಳು ಸಾಥ್ ನೀಡುತ್ತಿದ್ದು ತಮ್ಮ ಜೇಬು ತುಂಬಿಸುವ ಮರಳುಕಳ್ಳರಿಗೆ ಫುಲ್ ಪ್ರೊಟೆಕ್ಷನ್ ನೀಡುತ್ತಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ತೆರಳದಂತೆ ರಾಜಕಾರಣಿಗಳೇ ಒತ್ತಡ ಹೇರುತ್ತಿದ್ದು, ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಂತಾಗಿದೆ.
ರಾಜಕಾರಣಿಗಳ ಹೆಸರು ಹೇಳಿ ಅಧಿಕಾರಿಗಳೊಂದಿಗೆಯೇ ವಾಗ್ವಾದಕ್ಕಿಳಿಯುವ ಮರಳು ಕಳ್ಳರು, ಹಲ್ಲೆ,ಕೊಲೆಗೂ ಮುಂದಾಗುತ್ತಾರೆ ಎನ್ನುವ ಕಟು ಸತ್ಯಕ್ಕೆ ಹಲವು ಉದಾಹರಣೆಗಳಿವೆ. ಇದೆಲ್ಲವಕ್ಕೂ ಕಡಿವಾಣ ಬೀಳುವ ದಿನ ಯಾವಾಗ ಬರುತ್ತದೆ ಎನ್ನುವುದೇ ಅಧಿಕಾರಿಗಳು ತೋಡಿಕೊಳ್ಳುವ ನೋವಾಗಿದೆ.