ಮಂಗಳೂರು:ವಿದೇಶದಲ್ಲಿ ವಾಸಿಸುತ್ತಿರುವುದಾಗಿ ಬಂಡಲ್ ಬಿಟ್ಟ ವ್ಯಕ್ತಿಯಿಂದ ಶಿಕ್ಷಕಿಗೆ ನಾಮ!! ಮ್ಯಾಟ್ರಿಮೋನಿ ಪ್ರೊಫೈಲ್ ನಲ್ಲಿ ಅಂದ ಕಂಡ ಶಿಕ್ಷಕಿ ಮಂಗ ಆದದ್ದು ಎಲ್ಲಿ!?-ಠಾಣೆಯಲ್ಲಿ ಪ್ರಕರಣ ದಾಖಲು
ಮಂಗಳೂರು: ತಪ್ಪು ದಾರಿ ಹಿಡಿಯುವ ತನ್ನ ವಿದ್ಯಾರ್ಥಿಗಳಿಗೆ ಸರಿ ದಾರಿಯ ತೋರಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ. ಆದರೆ ಅದೇ ಶಿಕ್ಷಕರು ತಪ್ಪು ದಾರಿ ಹಿಡಿದು, ತಾವೇ ತಮ್ಮನ್ನು ಮೋಸದ ಬಲೆಗೆ ಬೀಳುವಂತೆ ಮಾಡಿ ಮೋಸ ಹೋದರೆ ಏನಾಗುತ್ತದೆ ಎಂಬುವುದಕ್ಕೆ ಇದೊಂದು ಉದಾಹರಣೆ.
ಇಂತಹದೊಂದು ಘಟನೆ ಬುದ್ಧಿವಂತರ ಜಿಲ್ಲೆ ಮಂಗಳೂರಿನಲ್ಲಿ ನಡೆದಿದ್ದು, ಕನ್ನಡ ಮ್ಯಾಟ್ರಿಮನಿ ಯಲ್ಲಿ ವ್ಯಕ್ತಿಯೊಬ್ಬನ ಹಿಂದೆ ಬಿದ್ದ ಶಿಕ್ಷಕಿಯೊಬ್ಬರು ಲಕ್ಷಗಟ್ಟಲೆ ಹಣ ಕಳೆದುಕೊಂಡ ಬಗ್ಗೆ ಪ್ರಕರಣವೊಂದು ದಾಖಲಾಗಿದೆ.
ಶಿಕ್ಷಕಿಯೊಬ್ಬರಿಗೆ ತನ್ನ ಅಣ್ಣ ಮ್ಯಾಟ್ರಿಮೋನಿಯಲ್ಲಿ ಅನಿಲ್ ಚಂದ್ರ ಎಂಬಾತನನ್ನು ಪರಿಚಯಿಸಿದ್ದು, ಶಿಕ್ಷಕಿ ಆತನೊಂದಿಗೆ ಫೋನ್ ಕರೆಯಲ್ಲಿ ಮಾತನಾಡಲು ಪ್ರಾರಂಭಿಸಿದ್ದರು.ಅತ್ತ ಕಡೆಯಿಂದ ನಯವಾಗಿ ಶಿಕ್ಷಕಿಯೊಂದಿಗೆ ಮಾತನಾಡುತ್ತ ತನ್ನ ಬುಟ್ಟಿಗೆ ಬೀಳಿಸಿಕೊಂಡ ಆ ವ್ಯಕ್ತಿ ತಾನು ವಿದೇಶದಲ್ಲಿ ವಾಸಿಸುತ್ತಿರುವುದಾಗಿ ಬಂಡಲ್ ಬಿಟ್ಟಿದ್ದ. ಇದನ್ನು ನಂಬಿದ ಶಿಕ್ಷಕಿ ಆತನ ಆಗುಹೋಗುಗಳಿಗೂ ಸ್ಪಂದಿಸುವ ಕೆಲಸಕ್ಕೆ ಕೈ ಹಾಕಿದ್ದರೋ ಏನೋ, ಅಂತೂ ಆತ ತನ್ನ ಆಟ ಶುರು ಮಾಡಿದ್ದಾನೆ.
ಮೊದಲಿಗೆ ಕಳೆದ ಫೆ.ಯಲ್ಲಿ ತನ್ನ ಗೆಳೆಯನೊಬ್ಬನಿಗೆ ಅನಾರೋಗ್ಯವಿದ್ದು ಅಗತ್ಯ ಹಣ ಹೊಂದಿಸಲು ಶಿಕ್ಷಕಿಯ ನೆರವು ಕೇಳಿದ್ದ. ಇದನ್ನು ನಂಬಿದ ಶಿಕ್ಷಕಿ ಆತನ ಇನ್ನೊಬ್ಬ ಗೆಳೆಯನ ಬ್ಯಾಂಕ್ ಖಾತೆಗೆ ಲಕ್ಷ ತುಂಬಿಸಿದ್ದರು. ಮರುದಿನ ಇನ್ನೂ ಒಂದು ಲಕ್ಷ ಸುರಿದಿದ್ದರು.ಅದಾಗಿ ಫೆ.26 ರಂದು ಅನಿಲ್ ಚಂದ್ರ ಭಾರತಕ್ಕೆ ಬರುತ್ತಿರುವುದಾಗಿ ತಿಳಿಸಿದ್ದು ಇತ್ತ ಟೀಚರಮ್ಮನ ಖುಷಿ ಗಗನಕ್ಕೇರಿದೆ.
ಮರುದಿನ ಬೆಳಿಗ್ಗೆ ವ್ಯಕ್ತಿಯೊಬ್ಬ ಶಿಕ್ಷಕಿಗೆ ಕರೆ ಮಾಡಿದ್ದೂ, ಅನಿಲ್ ನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಆತನ ಬಿಡುಗಡೆಗೆ ಲಕ್ಷ ಹೊಂದಿಸಬೇಕು ಎಂದು ಕೇಳಿದ್ದ. ಇದರಿಂದ ಅನುಮಾನಗೊಂಡ ಶಿಕ್ಷಕಿ ಹಣ ನೀಡಲು ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.