ಪುತ್ತೂರು: ತಾಲೂಕಿನಲ್ಲೇ ಅತೀ ದೊಡ್ಡ ಗ್ರಾಮಕ್ಕೆ ಬಂದೊದಗಿದೆ ಅಧಿಕಾರಿಗಳ ಕೊರತೆ!!ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯ ಖಾಯಂ ಗೊಳಿಸಲು ಮನವಿ-ಪ್ರತಿಭಟನೆಯ ಎಚ್ಚರಿಕೆ
ಪುತ್ತೂರು: ತಾಲೂಕಿನ ಅತೀ ದೊಡ್ಡ ಗ್ರಾಮವೆಂದೇ ಕರೆಯಲ್ಪಡುವ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಗೆ ಕಳೆದ ಕೆಲ ಸಮಯಗಳಿಂದ ಖಾಯಂ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯ ಕೊರತೆ ಉದ್ಭವಿಸಿದೆ.
ಸುಮಾರು ಹದಿನಾಲ್ಕು ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಹಾಗೂ ಸುಮಾರು 22 ಮಂದಿ ಸದಸ್ಯರಿರುವ ಬೃಹತ್ ಗ್ರಾಮ ಪಂಚಾಯತ್ ಇದಾಗಿದ್ದು ಇಲ್ಲಿನ ಸಮಸ್ಯೆ ಹೇಳತೀರದಾಗಿರುವುದು ಮಾತ್ರ ಬೇಸರದ ಸಂಗತಿ. ಈ ಮೊದಲು ಇದ್ದ ಒಬ್ಬ ಕಾರ್ಯದರ್ಶಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ಆದೇಶಿಸಿರುವ ಇಲಾಖೆ ಆ ಬಳಿಕ ಇಲ್ಲಿಗೆ ಖಾಯಂ ಆಗಿ ಯಾರನ್ನೂ ನೇಮಿಸಿಲ್ಲದಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.
ಸದ್ಯ ಇಲ್ಲಿನ ಹಲವು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು ಅಭಿವೃದ್ಧಿ ಅಧಿಕಾರಿಯ ಕೊರತೆ ಎದ್ದು ಕಾಣುತ್ತಿದೆ. ವಾರದಲ್ಲಿ ಒಂದೆರಡು ದಿನ ಮಾತ್ರ ಬದಲಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಬೇರೆಡೆಯಿಂದ ಬಂದು ಚಾರ್ಜ್ ತೆಗೆದುಕೊಳ್ಳುತ್ತಿದ್ದು ಕೆಲವು ದಾಖಲೆಗಳಿಗೆ ಸಹಿ ಹಾಕುವ ಹೊತ್ತಿಗಾಗಲೇ ಸಮಯ ಮೀರಿ ಮನೆ ಕಡೆಗೆ ಹೆಜ್ಜೆ ಹಾಕುವಂತಾಗಿದೆ.
ಇದೆಲ್ಲದರಿಂದ ಬೇಸತ್ತ ಇಲ್ಲಿನ ಗ್ರಾಮಸ್ಥರು ಹಾಗೂ ಪಂಚಾಯತ್ ಸದಸ್ಯರಾದ ಚಂದ್ರಹಾಸ ಈಶ್ವರ ಮಂಗಲ,ಪ್ರದೀಪ್ ರೈ ಎಂಬವರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರ ಗಮನ ಸೆಳೆದಿದ್ದು, ಶೀಘ್ರವೇ ಖಾಯಂ ಅಧಿಕಾರಿಗಳಿಬ್ಬರನ್ನು ನೇಮಿಸಲು ಮನವಿ ಸಲ್ಲಿಸಲಾಗಿದೆ.
ಬೇಡಿಕೆ ಈಡೇರದೆ ಅಧಿಕಾರಿಗಳನ್ನು ನೇಮಿಸದೆ ಇದ್ದಲ್ಲಿ ಮಾರ್ಚ್ 10 ರಂದು ಪಂಚಾಯತ್ ಎದುರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದು, ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ, ಪಂಚಾಯತ್ ಗೆ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯ ಖಾಯಂ ನೇಮಕಾವಾಗುತ್ತದೆಯೇ ಎಂಬುವುದನ್ನು ಕಾದುನೋಡಬೇಕಿದೆ.