ವೈದ್ಯರೆಂದು ಸೋಗು ಹಾಕಿ ಮಕ್ಕಳಿಲ್ಲದವರಿಗೆ ಟ್ರೀಟ್ಮೆಂಟ್ ನೀಡುತ್ತಿದ್ದ ಖತರ್ನಾಕ್ ದಂಪತಿಯ ಬಂಧನ!
ಈ ಜಗತ್ತಿನಲ್ಲಿ ಮೋಸ ಮಾಡುವವರು ಇರುವವರೆಗೆ ಮೋಸ ಹೋಗುವವರು ಕೂಡಾ ಇದ್ದಾರೆ ಅನ್ನೋದು ಸತ್ಯವಾಗುವಂತಹ ಹಲವಾರು ನಿದರ್ಶನಗಳನ್ನು ನಾವು ಕಾಣಬಹುದು. ಅಂತದ್ದೇ ಒಂದು ಘಟನೆ ತುಮಕೂರು ಜಿಲ್ಲೆ ನೊಣವಿನಕೆರೆ ವ್ಯಾಪ್ತಿಯಲ್ಲಿ ನಡೆದಿದೆ.
ಮಕ್ಕಳಿಲ್ಲದ ಸತಿಪತಿಯರನ್ನೇ ಗುರಿಯಾಗಿಸಿ ಮೋಸ ಮಾಡುತ್ತಿದ್ದ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಮೋಸ ಹೋದವರು ಹಣ ಕಳೆದುಕೊಂಡದ್ದು ಮಾತ್ರವಲ್ಲ ಆರೋಗ್ಯ ಕೂಡಾ ಕಳೆದುಕೊಂಡಿದ್ದಾರೆ.
ಈ ಖತರ್ ನಾಕ್ ಜೋಡಿ ಕಾರಿಗೆ ವೈದ್ಯರ ಲೋಗೋ ಹಾಕಿಕೊಂಡು ಸ್ಕೆತೋಸ್ಕೋಪ್ ಹಿಡಿದುಕೊಂಡು ಡಾಕ್ಟರ್ ಥರ ಆ್ಯಕ್ಟಿಂಗ್ ಮಾಡಿಕೊಂಡು ಮಕ್ಕಳಿಲ್ಲದ ದಂಪತಿಯನ್ನು ಸಂಪರ್ಕಿಸಿ ತಾವು ಕೊಟ್ಟ ಮದ್ದು ಪಡೆದು ಹೇಳಿದಂತೆಯೇ ಮಾಡಿದರೆ ಮಕ್ಕಳಾಗುತ್ತದೆ ಎಂದು ಹಣ ಪಡೆದು ವಂಚಿಸಿದ್ದಾರೆ.
ಒಬ್ಬೊಬ್ಬರಿಂದ 2 ರಿಂದ 3 ಲಕ್ಷ ರೂ.ವರೆಗಿನ ಇಂಜೆಕ್ಷನ್, ಪೌಡರ್ ಇತ್ಯಾದಿಯನ್ನು ಪ್ಯಾಕೇಜ್ ಮಾಡಿ ನೀಡುತ್ತಿದ್ದರು. ನಂತರ ಸೂಚನೆ ಕೊಟ್ಟು ನಂತರ ಸ್ಕ್ಯಾನಿಂಗ್ ಮಾಡಬಾರದು ಎಂದು ತಾಕೀತು ಮಾಡುತ್ತಾರೆ. ಹೀಗೆ ಇವರ ಮೋಸದ ಜಾಲಕ್ಕೆ ಬಿದ್ದ ದಂಪತಿಗಳೆಷ್ಟೋ ? ಈಗ ಹಣ ಆರೋಗ್ಯ ಎರಡೂ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಹಲವು ಜೋಡಿ.
ಈಕೆಯಿಂದ ಇಂಜೆಕ್ಷನ್ ಪಡೆದ ಬಳಿಕ ಮಹಿಳೆಯೊಬ್ಬರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಇವರಿಂದ ಔಷಧಿ ಪಡೆದ ಎರಡೇ ತಿಂಗಳಲ್ಲಿ ಮಹಿಳೆಯರ ದೇಹದಲ್ಲಿ ಬದಲಾವಣೆ ಆಗಿದ್ದು, ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.
ಕಿಡ್ನಿ ಸಮಸ್ಯೆ, ಮೆದುಳು ಸಮಸ್ಯೆ ಹಾಗೂ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಈ ಮಹಿಳೆ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಲ್ಲಿಯವರೆಗೆ 10 ಲಕ್ಷ ರೂಪಾಯಿ ಖರ್ಚಾದರೂ ಗಂಭೀರ ಸ್ಥಿತಿಯಲ್ಲಿದ್ದಾರೆ.
ದೂರುಗಳ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರು ಆರೋಪಿಗಳನ್ನು ಸಕಲೇಶಪುರದಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿಗಳಿಂದ 10 ಲಕ್ಷ ರೂ. ನಗದು ಹಾಗೂ 250 ಗ್ರಾಂ ಚಿನ್ನಾಭರಣ ಕೂಡಾ ವಶಪಡಿಸಿಕೊಳ್ಳಲಾಗಿದೆ. ಡಾಕ್ಟರ್ ಲೋಗೋ ಹಾಕಿಕೊಂಡು ವಂಚಿಸುತ್ತಿದ್ದ ಮಹೀಂದ್ರಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. 70 ಮಂದಿ ದಂಪತಿಗಳಿಗೆ ತಿಪಟೂರು ತಾಲೂಕಿನಲ್ಲೇ ವಂಚಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಮೋಸ ಹೋದ ದಂಪತಿಗಳು ಮರ್ಯಾದೆಗೆ ಅಂಜಿ ದೂರು ಕೊಡಲು ಹಿಂದೇಟು ಹಾಕಿರುವುದು ಕಂಡು ಬಂದಿದೆ.