ವಿದ್ಯಾರ್ಥಿಗಳೇ ಗಮನಿಸಿ: ಬದಲಾದ ಬೇಸಿಗೆ ರಜೆ | ರಾಜ್ಯದ ಪ್ರೌಢ, ಪ್ರಾಥಮಿಕ ಶಾಲೆಗಳಿಗೆ ಎಪ್ರಿಲ್ 10 ರಿಂದ ಬೇಸಿಗೆ ರಜೆ ಪ್ರಾರಂಭ| ಮೇ 16 ರಿಂದ ಶಾಲಾರಂಭ- ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ
ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವ ಮತ್ತು 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
2021-22 ನೇ ಸಾಲಿನ 1 ರಿಂದ 9 ನೇ ತರಗತಿಗಳ ವಾರ್ಷಿಕ ಪರೀಕ್ಷೆ ಮಾರ್ಚ್ 24 ರಿಂದ ಪ್ರಾರಂಭವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಬೇಸಿಗೆ ರಜೆ ಎಪ್ರಿಲ್ 10 ರಿಂದ ಆರಂಭವಾಗಲಿದೆ ಎಂದು ಶೈಕ್ಷಣಿಕ ಚಟುವಟಿಕೆಗಳ ಪಟ್ಟಿಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಶೈಕ್ಷಣಿಕ ಚಟುವಟಿಕೆಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ರಾಜ್ಯದಲ್ಲಿ ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಮೇ 29 ರಿಂದ ಪ್ರಾರಂಭವಾಗಿ, ಎಪ್ರಿಲ್ 10 ಕ್ಕೆ ಮುಕ್ತಾಯವಾಗುತ್ತದೆ.
ಪ್ರಸ್ತುತ ಕೋವಿಡ್ ಪ್ರತಿಕೂಲ ಸನ್ನಿವೇಶದಿಂದಾಗಿ ಫ್ರೆಬವರಿ 2020 ರಿಂದ ಶಾಲೆಗಳಿಗೆ ಅನಿವಾರ್ಯವಾಗಿ ರಜೆ ನೀಡುವ ಸಂದರ್ಭದಿಂದಾಗಿ 2019-2020, 2020-2021 ಮತ್ತು 2021-22 ನೇ ಸಾಲಿನ ಶೈಕ್ಷಣಿಕ ಸಾಲುಗಳಲ್ಲಿ ಶಾಲೆಗಳು ಸ್ಥಗಿತಗೊಳಿಸಿ, ನಡೆದ ಕಾರಣ ಶೆ.50 ರಿಂದ 60 ರಷ್ಟು ದಿನಗಳಲ್ಲಿ ಮಾತ್ರ ಭೌತಿಕವಾಗಿ ಶಾಲಾ ತರಗತಿಗಳು ನಡೆಸಲಾಗಿದೆ.
ಮುಂಬರುವ ಶೈಕ್ಷಣಿಕ ವರ್ಷ 2022-23 ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷ 2021-22 ಅನ್ನು ದಿನಾಂಕ 09-04-2022 ಕ್ಕೆ ಮುಕ್ತಾಯಗೊಳಿಸಲಾಗುವುದು. 2021-22 ನೇ ಸಾಲಿನ ಬೇಸಿಗೆ ರಜೆಯನ್ನು ದಿನಾಂಕ : 10-04-2022 ರಿಂದ 15-05-2022 ನೀಡಲಾಗಿದೆ.
ಮುಂದಿನ ಶೈಕ್ಷಣಿಕ ವರ್ಷವನ್ನು 16-05-2022 ರಂದು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.