ಕೆಪಿಎಸ್ಸಿ ಸಂದರ್ಶನ ಅಂಕ 200 ರಿಂದ 25 ಕ್ಕೆ ಇಳಿಕೆ | ನೇಮಕಾತಿ ನಿಯಮ ತಿದ್ದುಪಡಿಗೆ ಸಚಿವ ಸಂಪುಟ ನಿರ್ಧಾರ!

ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೆಷನರಿ ( ಗ್ರೂಪ್ ಎ ಮತ್ತು ಬಿ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯ ಪರೀಕ್ಷೆಯ ಸಂದರ್ಶನದಲ್ಲಿ ನೀಡುವ ಅಂಕಗಳನ್ನು ಕಡಿತಗೊಳಿಸುವ ನಿರ್ಧಾರವನ್ನು ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಂಡಿದೆ.

 

ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೆಷನರ್ಸ್ ಮುಖ್ಯ ಪರೀಕ್ಷೆಯಲ್ಲಿದ್ದ 2 ಐಚ್ಛಿಕ ವಿಷಯಗಳನ್ನು ಕೈಬಿಡಲು ತೀರ್ಮಾನಿಸಲಾಗಿತ್ತು. ಪೂರ್ವಭಾವಿ ಪರೀಕ್ಷೆಯಲ್ಲಿ 400 ಅಂಕಗಳ ಪತ್ರಿಕೆ ಮುಂದುವರಿಸಿ, ಮುಖ್ಯ ಪರೀಕ್ಷೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. 2 ಐಚ್ಛಿಕ ಪರೀಕ್ಷೆ ಇಲ್ಲವಾದ ಕಾರಣದಿಂದ ಮುಖ್ಯ ಪರೀಕ್ಷೆಯ ಒಟ್ಟು‌ ಅಂಕಗಳನ್ನು 1750 ರಿಂದ 1250 ಕ್ಕೆ ಇಳಿಸಲಾಗಿದೆ. ಇಂಟರ್ ವ್ಯೂ ಟೆಸ್ಟ್ 200 ರಿಂದ 50 ಕ್ಕೆ ಇಳಿಸಲಾಗಿತ್ತು. ಈಗ ತಿದ್ದುಪಡಿ ಮಸೂದೆಯಲ್ಲಿ 50 ಅಂಕದಿಂದ 25 ಕ್ಕೆ ಇಳಿಸಲಾಗಿದೆ. ಒಟ್ಟಾರೆಯಾಗಿ ಇನ್ನು ಮುಂದೆ 25 ಅಂಕಗಳಿಗೆ ಸಂದರ್ಶನ ನಡೆಸಲು ನಿರ್ಧರಿಸಲಾಗಿದೆ.

ಅಂದರೆ ಮುಂದಿನ ದಿನಗಳಲ್ಲಿ ಲಿಖಿತ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡುವುದು ಇದರ ಹಿಂದಿರುವ ಉದ್ದೇಶ. ಮುಂಬರುವ ದಿನಗಳಲ್ಲಿ ನಡೆಯುವ ನೇಮಕಾತಿಯಲ್ಲಿ ಇದು ಅನ್ವಯವಾಗಲಿದೆ. ಸರಕಾರವು ಹೊಸದಾಗಿ ನಿಯಮಗಳನ್ನು ರೂಪಿಸಿದ ಬಳಿಕ ಕರಡು ಅಧಿಸೂಚನೆ ಹೊರಡಿಸಲಿದೆ. ನಂತರ ನಿಯಮಗಳು ಅನುಷ್ಠಾನಕ್ಕೆ ಬರಲಿದೆ.

ಕೆಪಿಎಸ್ಸಿ ನೇಮಕಾತಿಯಲ್ಲಿ ಅಕ್ರಮ ತಡೆಯುವ ನಿಟ್ಟಿನಲ್ಲಿ ಈ ಹೋಟಾ ಸಮಿತಿಯು ಈ ಹಿಂದೆ ಹಲವು ಶಿಫಾರಸ್ಸುಗಳನ್ನು ಮಾಡಿದೆ. ಇದರನ್ವಯ ಕೆಲವೊಂದು‌ ಬದಲಾವಣೆ ಮಾಡಿದೆ.

ಸಂದರ್ಶನದ ಸಮಯದಲ್ಲಿ ತಮಗೆ ಬೇಕಾದಂತಹ ವ್ಯಕ್ತಿಗಳಿಗೆ ಹೆಚ್ಚಿನ ಅಂಕ ನೀಡುವುದು, ಭ್ರಷ್ಟಾಚಾರ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿತ್ತು. ಅದರ ಮೇಲೆ ನಿಯಂತ್ರಣ ಹಾಕಲು ಸಂದರ್ಶನದ ಅಂಕ ಕಡಿಮೆ ಮಾಡಿರುವುದು ಒಳ್ಳೆಯದು. ಲಿಖಿತ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದಂತಹ ಅಭ್ಯರ್ಥಿಗಳು ಸಂದರ್ಶನದ ವೇಳೆ ಕಡಿಮೆ ಅಂಕ ಪಡೆದು ಉದ್ಯೋಗ ಕೈ ತಪ್ಪುತ್ತಿತ್ತು. ಹಾಗಾಗಿ ಇದಕ್ಕೆ ಕಡಿವಾಣ ಹಾಕಲು ಸರಕಾರದ ಈ ನಿರ್ಧಾರ ಸಾಧ್ಯವಾಗಲಿದೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.

Leave A Reply

Your email address will not be published.