ಮಂಗಳೂರು : ಬಂದರು ಠಾಣೆಯ ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು!ವೆನ್ಲಾಕ್ ಆಸ್ಪತ್ರೆ ಬಳಿ ಜನ ಜಮಾವಣೆ| ತನಿಖೆಗೆ ಆದೇಶ
ಮಂಗಳೂರು : ನಗರದ ಬಂದರು ಠಾಣೆಯ ಪೊಲೀಸರ ವಶದಲ್ಲಿದ್ದ ಕಳ್ಳತನ ಪ್ರಕರಣದ ಆರೋಪಿಯೊಬ್ಬ ಮೃತಪಟ್ಟಿದ್ದಾಗಿ ವರದಿ ಆಗಿದೆ.
ಉರ್ವಾಸ್ಟೋರ್ ನಿವಾಸಿ ರಾಜೇಶ್ ಕರ್ಕೇರ ( 32) ಮೃತ ಯುವಕ. ಎದೆನೋವು ಉಂಟಾಗಿದ್ದರಿಂದ ಪೊಲೀಸರು ವೆನ್ಲಾಕ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಯುವಕ ಆವಾಗಲೇ ಮೃತಪಟ್ಟಿದ್ದಾನೆ.
ಪೊಲೀಸರ ವಿಚಾರಣೆಗೆ ಹೆದರಿ ಈತನಿಗೆ ಹೃದಯಾಘಾತ ಆಯಿತೇ ? ಅಥವಾ ಬೇರಾವುದೇ ಕಾರಣ ಇರಬಹುದೇ ಎಂಬುದರ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.
ಜ್ಯೋತಿ ಸರ್ಕಲ್ ಬಳಿ ಸ್ಮಾರ್ಟ್ ಸಿಟಿ ಕಾಮಗಾರಿಗೆಂದು ಇರಿಸಿದ್ದ ಕಬ್ಬಿಣದ ಸಲಕರಣೆಗಳನ್ನು ಕದ್ದೊಯ್ಯುವ ಪ್ರಯತ್ನ ಮಾಡುವ ಆರೋಪದಲ್ಲಿ ಬೀಟ್ ಪೊಲೀಸರು ರಾಜೇಶ್ ಕರ್ಕೇರ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಇಂದು ಬೆಳಗಿನ ಜಾವದಲ್ಲಿ ಬಂಧಿಸಿದ್ದರು. ಇಂದು ಮಧ್ಯಾಹ್ನ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದಾಗಲೇ ರಾಜೇಶನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪಿದಾಗಲೇ ಯುವಕ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ರಾಜೇಶ್ ಕರ್ಕೇರ ಕುಡಿತದ ದಾಸನಾಗಿದ್ದ. ಮನೆ ಬಗ್ಗೆ ಜವಾಬ್ದಾರಿ ಇರದೆ, ಬೀದಿ ಬೀದಿ ಅಲೆಯುತ್ತಿದ್ದ. ಈತನ ಕುಟುಂಬ ತೀರಾ ಬಡವರು. ಮಗನ ಸಾವಿನ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ತಿಳಿದಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಮೃತ ವ್ಯಕ್ತಿಯ ಕುಟುಂಬದವರು ನೀಡಿರುವ ದೂರಿನ ಪ್ರಕಾರ, ಈ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಅವರ ಸಮುದಾಯದ ಮುಖಂಡರು ಕೂಡಾ ಪೊಲೀಸರನ್ನು ಸಂಪರ್ಕಿಸಿ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಈ ಬೇಡಿಕೆಯನ್ನು ಸ್ವೀಕರಿಸಿದ ಪೊಲೀಸ್ ಆಯುಕ್ತರು, ಪ್ರಕರಣವನ್ನು ಎಸಿಪಿ ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಮತ್ತು ಮ್ಯಾಜಿಸ್ಟ್ರೇಟ್ ವಿಚಾರಣೆ ಕೂಡಾ ನಡೆಯಲಿದೆ ಎಂದು ಹೇಳಿದರು. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.