ಕೇರಳದಲ್ಲೊಂದು ಮಾದರಿ ಕೋಮುಸೌಹಾರ್ದತೆ| ಸ್ಥಳೀಯ ಹಿರಿಯ ಮುಸ್ಲಿಂ ವ್ಯಕ್ತಿಯ ನಿಧನಕ್ಕೆ ಉತ್ಸವವನ್ನೇ ರದ್ದುಗೊಳಿಸಿ ಶೋಕಾಚರಣೆ ಮಾಡಿದ ದೇವಸ್ಥಾನದ ಆಡಳಿತ ಮಂಡಳಿ| ಈ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತ
ಕೋಮು ಸೌಹಾರ್ದತೆಗೆ ಉದಾಹರಣೆ ಅಂದರೆ ಇದೇ ಇರಬಹುದು. ತಿರೂರ್ ತ್ರಿಪಂಗೋಡ್ ಬೀರಂಚಿರ ಪುನ್ನಶ್ಶೇರಿ ಶ್ರೀ ಭಗವತಿ ದೇವಸ್ಥಾನದಲ್ಲಿ ತಾಲಪ್ಪೊಲಿ ಹಬ್ಬದ ಅಂಗವಾಗಿ ನಡೆಯಬೇಕಾಗಿದ್ದ ಮಹೋತ್ಸವವು, ಮುಸ್ಲಿಂ ವ್ಯಕ್ತಿಯೊಬ್ಬರು ನಿಧನ ಹಿನ್ನೆಲೆಯಲ್ಲಿ ರದ್ದುಗೊಳಿಸಿದೆ.
ದೇವಸ್ಥಾನದ ಉತ್ಸವ ಸಮಾರಂಭಕ್ಕೆ ಎಲ್ಲಾ ಅಣಿಯಾಗುತ್ತಿದ್ದ ಸಂದರ್ಭದಲ್ಲಿಯೇ ದೇವಸ್ಥಾನದ ಸ್ಥಳೀಯ ನಿವಾಸಿ ಚಿರೋಟ್ಟಿಲ್ ಹೈದರ್ ಎಂಬ ಹಿರಿಯ ಮುಸ್ಲಿಂ ವ್ಯಕ್ತಿಯೊಬ್ಬರು ನಿಧನರಾದ ಕಾರಣ ದೇವಸ್ಥಾನದ ಆಡಳಿತ ಮಂಡಳಿ ಉತ್ಸವವನ್ನೇ ರದ್ದುಗೊಳಿಸಿ ಶೋಕಾಚರಣೆ ವ್ಯಕ್ತಪಡಿಸಿದೆ. ಈ ಘಟನೆ ಧಾರ್ಮಿಕ ಸಾಮರಸ್ಯಕ್ಕೆ ಮಾದರಿ ಅಂತಾನೇ ಹೇಳಬಹುದು.
ಊರಿನ ಎಲ್ಲಾ ಹಿರಿಯ ಹಾಗೂ ಎಲ್ಲರೊಂದಿಗೂ ಆತ್ಮೀಯರಾಗಿದ್ದ ಹೈದರ್ ಅವರ ನಿಧನದ ಕಾರಣ ಆಚರಣೆಯನ್ನು ಕೈ ಬಿಡಲಾಗಿದೆ ಎಂದು ತಿಳಿದ ಮಹಲ್ಲಾ ಆಡಳಿತ ಸಮಿತಿ ಹೈದರ್ ಅವರ ಅಂತ್ಯಕ್ರಿಯೆಯ ಪ್ರಾರ್ಥನೆ ಸಂದರ್ಭ ಆಡಳಿತ ಮಂಡಳಿಯ ನಿರ್ಧಾರವನ್ನು ಹೃದಯತುಂಬಿ ಶ್ಲಾಘಿಸಿದರು.