ಚಿತ್ರಮಂದಿರಗಳಲ್ಲಿ ಕೊನೆಗೂ 100% ಆಸನ ಭರ್ತಿಗೆ ಅವಕಾಶ ನೀಡಿದ ರಾಜ್ಯ ಸರ್ಕಾರ !! | N-95 ಮಾಸ್ಕ್ ಧರಿಸಿದ್ದರೆ ಮಾತ್ರ ಒಳಪ್ರವೇಶಕ್ಕೆ ಗ್ರೀನ್ ಸಿಗ್ನಲ್
ರಾಜ್ಯ ಸರ್ಕಾರ ಕೊರೋನಾ ಕುರಿತು ಹೊಸ ಮಾರ್ಗಸೂಚಿ ಪ್ರಕಟಿಸಿದೆ. ರಾಜ್ಯದ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ರಾಜ್ಯ ಸರ್ಕಾರ ಹಲವು ಷರತ್ತಿನೊಂದಿಗೆ ಕೊನೆಗೂ ಅವಕಾಶ ಮಾಡಿಕೊಟ್ಟಿದೆ.
ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಪ್ರಕಾರ ಥಿಯೇಟರ್‌ಗೆ ಆಗಮಿಸುವವರು N-95 ಮಾಸ್ಕ್‌ಗಳನ್ನೇ ಧರಿಸಬೇಕು ಇಲ್ಲದಿದ್ದರೆ ಅಂತವರಿಗೆ ಅವಕಾಶ ಕೊಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.
ಮಾರ್ಗಸೂಚಿಯ ಪ್ರಕಾರ ಚಿತ್ರಮಂದಿರಗಳಿಗೆ ಬರುವ ಸಿನಿಪ್ರಿಯರು ಎರಡು ಡೋಸ್ ಲಸಿಕೆ ಪಡೆದಿರಬೇಕು, ಇಲ್ಲದಿದ್ದರೆ ಪ್ರವೇಶ ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ಥಿಯೇಟರ್, ಜಿಮ್ ಮತ್ತು ಈಜುಕೊಳ ಪ್ರವೇಶಿಸುವ ಮುನ್ನ ಕೋವಿಡ್‍ನ ಎರಡೂ ಡೋಸ್ ಲಸಿಕೆ ಪಡೆದಿರಬೇಕು. ಮಾಸ್ಕ್‌ಗಳಲ್ಲಿ N-95 ಮಾಸ್ಕ್ ಧರಿಸಿದವರಿಗೆ ಮಾತ್ರ ಚಿತ್ರಮಂದಿರದೊಳಗೆ ಪ್ರವೇಶ ಇತರ ಮಾಸ್ಕ್ ಧರಿಸಿ ಬಂದರೆ ನೋ ಎಂಟ್ರಿ. ಅಲ್ಲದೇ ಕೊರೋನಾ ಲಕ್ಷಣಗಳು ಇದ್ದರೆ ಅಂತವರಿಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡದಿರಲು ಸರ್ಕಾರ ಸೂಚಿಸಿದೆ. ಈ ನಿಯಮಗಳನ್ನು ಪಾಲನೆ ಮಾಡದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದೆ.
ಈ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ಪರಿಶೀಲನೆ ಸಭೆ ನಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಡಿಸೆಂಬರ್ ಕೊನೆ ವಾರದಲ್ಲಿ ಓಮಿಕ್ರಾನ್ ವೈರಾಣು ಹರಡುವಿಕೆ ಹೆಚ್ಚಾದ ಬಳಿಕ ಕೆಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಯಿತು. ಕೋವಿಡ್ ಸ್ಥಿತಿಗತಿ, ಆಸ್ಪತ್ರೆ ದಾಖಲಾತಿ ಅವಲೋಕಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಜನವರಿ 15 ರಿಂದಲೇ ಈ ಮಾರ್ಗಸೂಚಿಯಲ್ಲಿ ಕೆಲ ರಿಯಾಯಿತಿಗಳನ್ನು ನೀಡಲು ಆರಂಭಿಸಲಾಗಿತ್ತು. ಚಿತ್ರಮಂದಿರ, ಜಿಮ್, ಯೋಗ ಕೇಂದ್ರ, ಸ್ವಿಮ್ಮಿಂಗ್ ಪೂಲ್‍ನಲ್ಲಿ 50% ರಷ್ಟು ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ನಿಯಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಜನವರಿಯಲ್ಲಿ ಆಸ್ಪತ್ರೆಗಳಲ್ಲಿ 5-6% ಆಸ್ಪತ್ರೆ ದಾಖಲಾತಿ ಇತ್ತು. ಈಗ ಇದು 2% ಗೆ ಇಳಿಕೆಯಾಗಿದೆ ಎಂಬ ಅಂಶ ಗಮನಿಸಲಾಗಿದೆ. ಈ ನಿಯಮ ಹೇರಿದ್ದರಿಂದ ಚಿತ್ರಮಂದಿರಗಳ ಮಾಲೀಕರು, ನಿರ್ಮಾಪಕರು ಹಾಗೂ ಈ ಉದ್ಯಮದಲ್ಲಿರುವವರಿಗೆ ನಷ್ಟವಾಗಿದೆ. ಚಿತ್ರರಂಗದ ಅಭಿಮಾನಿಗಳು, ಉದ್ಯಮದಲ್ಲಿ ತೊಡಗಿಸಿಕೊಂಡವರ ನಿರೀಕ್ಷೆಯನ್ನು ಗಮನದಲ್ಲಿರಿಸಿ ಶೇ.100 ಆಸನ ಭರ್ತಿಗೆ ಅವಕಾಶ ಕೊಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
ಇದೇ ರೀತಿ ಜಿಮ್ ಮತ್ತು ಈಜುಕೊಳಗಳಲ್ಲೂ ಶೇ.100 ರಷ್ಟು ಬಳಕೆಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಮುನ್ನಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಚಿತ್ರ ವೀಕ್ಷಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ವೀಕ್ಷಿಸುವಾಗ ಒಳಗೆ ಆಹಾರ ಸೇವಿಸಲು ಅವಕಾಶ ನೀಡಬಾರದು ಎಂದು ಸೂಚಿಸಲಾಗುವುದು. ಈ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಅಧಿಕಾರಿಗಳು ಯಾವುದೇ ವೇಳೆಯಲ್ಲಿ ಪರಿಶೀಲನೆ ಮಾಡುತ್ತಾರೆ. ಈ ನಿಯಮಗಳನ್ನು ಪಾಲಿಸದಿದ್ದರೆ ಚಿತ್ರಮಂದಿರಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು
ಸರ್ಕಾರ ನಿಯಮಗಳನ್ನು ಹಿಂಪಡೆಯುತ್ತಿದೆ ಎಂದಾಕ್ಷಣ ಸಾರ್ವಜನಿಕರು ಮೈ ಮರೆಯಬಾರದು. ಮುಂದೆಯೂ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ಕೋವಿಡ್ ಇರುವಾಗಲೂ ಹೇಗೆ ಸೂಕ್ತ ನಡವಳಿಕೆಗಳನ್ನು ಪಾಲಿಸಬೇಕೆಂದು ಜನರಿಗೆ ತಿಳಿದಿದೆ. ಯಾರಿಗೂ ಆರ್ಥಿಕ ನಷ್ಟವಾಗಬಾರದೆಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.