ಮಾತನಾಡುವ ಗಿಳಿ ಕಾಣೆಯಾಗಿದೆ !!ಮಾಲೀಕನಿಂದ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಣೆ !!
ಮನುಷ್ಯನಷ್ಟೇ ಪ್ರಾಣಿಗಳಿಗೂ ಮಾನವೀಯತೆ ಇದೆ ಎಂದು ಎಲ್ಲರಿಗೂ ತಿಳಿದಿರೋ ವಿಷಯ. ಅನ್ನ ಹಾಕಿದ ಮಾಲೀಕನನ್ನು ಮನುಷ್ಯರಾದರೂ ಮರೆಯಬಹುದು. ಆದರೆ ಪ್ರಾಣಿಗಳು ಖಂಡಿತಾ ಇಲ್ಲ. ಇದಕ್ಕೆ ಉದಾಹರಣೆಯಾಗಿ ವೈದ್ಯರೊಬ್ಬರ ಮುದ್ದಿನ ಗಿಳಿಯೊಂದು ಕಾಣೆಯಾಗಿದೆ. ತಾವು ಸಾಕಿದ ಮಕ್ಕಳನ್ನೇ ಕಳಕೊಂಡಷ್ಟು ನೋವನ್ನು ಈ ಮನೆ ಮಂದಿ ಅನುಭವಿಸುತ್ತಿದ್ದಾರೆ.
ಈ ಗಿಳಿಯನ್ನು ಹುಡುಕಲು ತುಂಬಾ ಪ್ರಯತ್ನ ಮಾಡಲಾಗಿದೆ. ಆದರೆ ಸಿಕ್ಕಿಲ್ಲ. ಹಾಗಾಗಿ ಈ ವೈದ್ಯರು ಗಿಳಿಯನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ಬಹುಮಾನ ನೀಡಲಾಗುವುದು ಎಂದು ಬಹುಮಾನ ಘೋಷಿಸಿದ್ದಾರೆ.
ಈ ಗಿಳಿ ಕಾಣೆಯಾಗಿರುವುದು ರಾಜಸ್ಥಾನದ ಸಿಕಾರ್ ನಲ್ಲಿ. ಈ ನಗರದ ವೈದ್ಯ ವಿ.ಕೆ.ಜೈನ್ ಅವರು ಸುಮಾರು ಎರಡು ವರ್ಷಗಳ ಹಿಂದೆ 80 ಸಾವಿರ ರೂಪಾಯಿಗೆ ಗಿಳಿಯನ್ನು ಖರೀದಿಸಿದ್ದಾರೆ.
ಅದು ಮನುಷ್ಯರಂತೆ ಮಾತನಾಡುತ್ತದೆ. ಆದರೆ ಇದ್ದಕ್ಕಿದ್ದಂತೆ ಮೂರು ದಿನಗಳ ಹಿಂದೆ ಗಿಳಿ ಹಣ್ಣು ತಿನ್ನುವಾಗ ಹಾರಿಹೋಗಿದೆ. ಆ ನಂತರ ಮರಳಿ ಬಂದಿಲ್ಲ. ಈ ಬಗ್ಗೆ ಮಾತನಾಡಿದ ವೈದ್ಯ ಡಾ.ವಿ.ಕೆ.ಜೈನ್, ‘ ಎರಡು ವರ್ಷಗಳ ಹಿಂದೆ ಆಫ್ರಿಕನ್ ಗ್ರೇ ಬಣ್ಣದ ಎರಡು ಜೋಡಿ ಗಿಳಿಗಳನ್ನು 80 ಸಾವಿರಕ್ಕೆ ಖರೀದಿ ಮಾಡಿದ್ದೆ. ಕೊಕೊ ಎಂದು ಹೆಸರಿಟ್ಟಿದ್ದೆವು. ಈ ಎರಡು ವರ್ಷದಲ್ಲಿ ಕೊಕೊ ಮನೆಯ ಸದಸ್ಯನಂತೆಯೇ ಇದೆ. ಈಗ ಅದು ಇಲ್ಲದೇ ಇರುವುದು ನಮ್ಮ ಮನೆಮಂದಿಗೆಲ್ಲ ಹತಾಶೆ ಮೂಡಿದೆ ಎಂದಿದ್ದಾರೆ.
ಈ ಗಿಳಿ ಒಂದು ಸಾವಿರಕ್ಕೂ ಹೆಚ್ಚು ಪದಗಳನ್ನು ಮಾತನಾಡುತ್ತದೆ. ಎಲ್ಲರೊಂದಿಗೂ ಮಾತನಾಡುತ್ತಿದ್ದು, ಏನಾದರೂ ಕೇಳಿದರೂ ಉತ್ತರಿಸುತ್ತಿತ್ತು. ನಮ್ಮ ಮನೆಯಲ್ಲಿ ಮಗ ಸೊಸೆ, ಮಗಳು ಜೊತೆಗೆ ಹೆಂಡತಿ ಎಲ್ಲರೂ ತೀವ್ರ ದುಃಖದಲ್ಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.