ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳ ಇಲ್ಲ | ರಾಜ್ಯ ಸರಕಾರ ಘೋಷಣೆ
ಬೆಂಗಳೂರು : ರಾಜ್ಯ ಸರಕಾರ ಭಾನುವಾರ ‘ ವೈದ್ಯಕೀಯ ಮತ್ತು ದಂತವಿಜ್ಞಾನ ಕೋರ್ಸ್ ಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಶುಲ್ಕ ಹೆಚ್ಚಳ ಇಲ್ಲ ‘ ಎಂದು ಪ್ರಕಟಿಸಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಶುಲ್ಕ ನೀತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಿದ್ದು, ಕೆಇಎ ವೆಬ್‌ಸೈಟ್ ನಲ್ಲಿ ಭಾನುವಾರ ಪ್ರಕಟಿಸಿದೆ. ನೀಟ್ ಕೌನ್ಸಿಲಿಂಗ್ ಹಿನ್ನೆಲೆಯಲ್ಲಿ, ಖಾಸಗಿ ವೈದ್ಯಕೀಯ ಕಾಲೇಜುಗಳ ಒತ್ತಡದಿಂದಾಗಿ ರಾಜ್ಯ ಸರಕಾರ ವೈದ್ಯಕೀಯ ಹಾಗೂ ದಂತವಿಜ್ಞಾನ ಕೋರ್ಸ್ ಗಳಿಗೆ ಶುಲ್ಕ ಹೆಚ್ಚಿಸಲು ಮುಂದಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಖಾಸಗಿ ವೈದ್ಯಕೀಯ ಮತ್ತು ದಂತ ವಿಜ್ಞಾನ ಕಾಲೇಜುಗಳ ಆಡಳಿತ ಮಂಡಳಿಗಳು ಶೇ.30 ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಸರಕಾರವನ್ನು ಒತ್ತಾಯಿಸಿತ್ತು. ಆದರೆ ಕಳೆದ ವರ್ಷದ ಶುಲ್ಕವನ್ನೇ ಮುಂದುವರಿಸುವಂತೆ ಖಾಸಗಿ ಕಾಲೇಜುಗಳ ಮನವೊಲಿಸುವಲ್ಲಿ ಸರಕಾರ ಯಶಸ್ವಿಯಾಗಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳ ಸರಕಾರಿ ಕೋಟಾದ ಎಂಬಿಬಿಎಸ್ ಸೀಟುಗಳಿಗೆ ಹಾಲಿ ಇರುವ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿದ್ಯಾರ್ಥಿಗಳು ಖಾಸಗಿ ವೈದ್ಯಕೀಯ ವಿಜ್ಞಾನ ಕಾಲೇಜುಗಳ ಸರಕಾರಿ ಕೋಟಾದ ಎಂಬಿಬಿಎಸ್ ಸೀಟುಗಳಿಗೆ 1,28,746 ರೂ.ಶುಲ್ಕ ಪಾವತಿಸಬೇಕಾಗುತ್ತದೆ. ಸರಕಾರಿ ವೈದ್ಯ ಕಾಲೇಜುಗಳ ಸೀಟುಗಳಿಗೆ ರೂ.59,800 ಶುಲ್ಕ ಪಾವತಿ ಮಾಡಬೇಕು. ದಂತವಿಜ್ಞಾನ ಕೋರ್ಸ್ ಗೆ ಖಾಸಗಿ ಕಾಲೇಜುಗಳ ಸರಕಾರಿ ಕೋಟಾದ ಸೀಟುಗಳಿಗೆ 85,356 ರೂಪಾಯಿ ಶುಲ್ಕ ಇರುತ್ತದೆ.