ಕಳೆದು ಹೋದ ನಾಯಿಯ ಹುಡುಕಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ ಪೊಲೀಸ್ | 10 ದಿನದಲ್ಲಿ ತಮ್ಮ ಪ್ರೀತಿಯ ಶ್ವಾನ ಪತ್ತೆ ಮಾಡಿದ ಇಂಜಿನಿಯರ್ ಬ್ರದರ್ಸ್!!!
ನಮ್ಮಿಂದ ಏನಾದರೂ ಕಳೆದುಹೋದರೆ, ನಮಗೆ ಏನಾದರೂ ಸಮಸ್ಯೆಗಳಾದರೆ ನಾವು ಮೊದಲು ಧಾವಿಸುವುದೇ ಪೊಲೀಸ್ ಸ್ಟೇಷನ್ ಗೆ. ಆದರೆ ಕೆಲವೊಮ್ಮೆ ಪೊಲೀಸರೇ ನಮ್ಮಿಂದ ಆಗಲ್ಲ ಎಂದು ಕೈ ಚೆಲ್ಲಿ ಕುಳಿತರೆ ಏನು ಮಾಡುವುದು ? ಇಂಥಹ ಒಂದು ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಅಣ್ಣ ತಮ್ಮಂದಿರು.
ಈ ಘಟನೆ ನಡೆದಿರುವುದು ಕೇರಳದ ವಜತಕಾಡುವಿನಲ್ಲಿ. ಸತೀಶ್ ಥಂಪಿ ಅವರ ಲಾಸ ಅಪ್ಸೋ ತಳಿಯ ಬ್ರುನೋ ಹೆಸರಿನ ನಾಯಿ ಜನವರಿ 16 ರಂದು ನಾಪತ್ತೆಯಾಗಿತ್ತು. ಇದನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ, ಪೊಲೀಸ್ ಹೇಳಿದ್ದು, ಈ ಕೋವಿಡ್ ಪರಿಸ್ಥಿತಿಯಲ್ಲಿ ನಾಯಿ ಹುಡುಕಲು ಸಾಧ್ಯವಿಲ್ಲ ಎಂದು. ಇದರಿಂದ ಬೇಸರಗೊಂಡ ಕುಟುಂಬ ತಾವೇ ನಾಯಿ ಹುಡುಕುವುದಾಗಿ ನಿರ್ಧಾರ ಮಾಡುತ್ತಾರೆ.
ಸತೀಶ್ ಥಂಪಿ ಅವರ ಮಕ್ಕಳಾದ ನವೀನ್ ಥಂಪಿ ಮತ್ತು ಕಿರಣ್ ಥಂಪಿ ಇಂಜಿನಿಯರ್ ವಿದ್ಯಾರ್ಥಿಗಳಾಗಿದ್ದಾರೆ. ಇವರಿಬ್ಬರು ತಮ್ಮ ಪ್ರೀತಿಯ ನಾಯಿಯ ಹುಡುಕಾಟದ ತನಿಖೆ ಕೈಗೊಳ್ಳುತ್ತಾರೆ. ನಾಯಿ ನಾಪತ್ತೆಯಾದ ದಿನ ಇಬ್ಬರು ಬೈಕ್ ಸವಾರರು ಜಗತಿ ಪ್ರದೇಶಕ್ಕೆ ಇದೇ ರೀತಿಯ ನಾಯಿಯೊಂದಿಗೆ ಹೋಗಿದ್ದರು ಎಂಬ ಮಾಹಿತಿ ದೊರೆಯುತ್ತದೆ. ನಂತರ ನಾಯಿಯ ಪೋಸ್ಟರನ್ನು 3 ಕಿ ಮೀ ಗಳ ವ್ಯಾಪ್ತಿಯಲ್ಲಿ ಹಾಕುತ್ತಾರೆ. ಆದರೆ ಸುಮಾರು 5 ದಿನಗಳ ಕಾಲ ಜಗತಿ ಏರಿಯಾ ಹುಡುಕಾಡಿದರೂ ನಾಯಿ ದೊರಕುವುದಿಲ್ಲ.
ಇಡಪ್ಪಂಜಿಯ ಪೆಟ್ ಶಾಪ್ ನಲ್ಲಿ ಇಬ್ಬರು ಬೈಕ್ ನಲ್ಲಿ ನಾಯಿಯೊಂದಿಗೆ ಮಾರುತಂಕುಝಿ ಕಡೆಗೆ ಹೋಗಿದ್ದ ದೃಶ್ಯ ಸಿಸಿಟಿವಿಯ ಮುಖಾಂತರ ಇವರಿಗೆ ದೊರೆಯುತ್ತದೆ. ಅಕ್ಕಪಕ್ಕದ ಮನೆಯ, ಅಂಗಡಿಯವರ ಸಹಾಯದಿಂದ ಸಿಸಿಟಿವಿ ಪರಿಶೀಲಿಸುತ್ತಾರೆ. ಮೊದಲಿಗೆ ಎಲ್ಲರೂ ಕೊಡಲಿಕ್ಕೆ ನಿರಾಕರಿಸಿದರೂ ನಂತರ ವಿಷಯ ತಿಳಿದು ಸಹಾಯ ಮಾಡುತ್ತಾರೆ.
ಜ.24 ರಂದು ಮಾರುತಂಕಝಿ ದೇವಸ್ಥಾನದ ಸಿಸಿಟಿವಿಯಲ್ಲಿ ನಾಯಿಯೊಂದಿಗೆ ತೆರಳಿದ ಬೈಕ್ ನ ನಂಬರ್ ಸಿಗುತ್ತದೆ. ಈ ಸಂಖ್ಯೆಯ ಆಧಾರದ ಮೇಲೆ ವಾಹನಗಳ ಪಟ್ಟಿ ಮಾಡುತ್ತಾರೆ ಇಬ್ಬರು. ಜ 26 ರಂದು ಮಧ್ಯಾಹ್ನ ನೆಟ್ಟಯಂ ನಲ್ಲಿನ ಅಂಗಡಿಯೊಂದರ ಸಿಸಿಟಿವಿ ದೃಶ್ಯಗಳಿಂದ ಹೆಲ್ಮೆಟ್ ಇಲ್ಲದೆ ಇರುವ ಮುಖಗಳು ದರ್ಶನವಾಗುತ್ತದೆ.
ಅವರ ಮುಖಗಳು ಸ್ಪಷ್ಟವಾದ ನಂತರ ಅವರ ವಿವರಗಳು, ಚಿತ್ರಗಳನ್ನು ನೆಟ್ಟಿಯಂನಲ್ಲಿರುವ ಅಂಗಡಿಯಲ್ಲಿ ಮತ್ತು ನಿವಾಸಿಗಳ ಸಂಘದಲ್ಲಿ ಪೋಸ್ಟ್ ಮಾಡುತ್ತಾರೆ.
ಇದನ್ನು ಅರಿತ ನಾಯಿ ಕಳ್ಳರು, ಕೂಡಲೇ ನವೀನ್ ಹಾಗೂ ಕಿರಣ್ ಗೆ ಫೋನ್ ಮಾಡಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳದಂತೆ ಮನವಿ ಮಾಡುತ್ತಾರೆ. ನಾಯಿ ಸುರಕ್ಷಿತವಾಗಿದೆ. ನಿಮ್ಮ ನಾಯಿಯನ್ನು ಹತ್ತು ದಿನಗಳ ಜಾಲ ಚೆನ್ನಾಗಿ ನೋಡಿಕೊಳ್ಳಲಾಗಿದೆ ಎಂದು ಹೇಳಿದ್ದರಿಂದ ಅವರ ವಿರುದ್ಧ ದೂರು ದಾಖಲಿಸುವುದಿಲ್ಲ.
ಬ್ರುನೋ ನಾಯಿಯ ಹತ್ತನೇ ಹುಟ್ಟುಹಬ್ಬ ಗುರುವಾರ ಸಂಭ್ರಮದಿಂದ ಈ ಆಚರಿಸಿದ್ದಾರೆ. ಬ್ರುನೋ ಮರಳಿ ಬಂದಿದ್ದನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದೆ ಈ ಕುಟುಂಬ. ಇಂಜಿನಿಯರ್ ಬ್ರದರ್ಸ್ ಗಳ ಈ ಪತ್ತೆಗಾರಿಕೆಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.