ಶೀಘ್ರವೇ 882 ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ | ಮುಂದಿನ ಒಂದು ವಾರದಲ್ಲಿ ಅಧಿಸೂಚನೆ | ಮೂರು ತಿಂಗಳಲ್ಲಿ ನೇಮಕಾತಿ | ಸಚಿವ ಗೋವಿಂದ ಕಾರಜೋಳ
ಬೆಂಗಳೂರು : ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 882 ಬ್ಯಾಕ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು ಮತ್ತು ವಿಶ್ವವಿದ್ಯಾಲಯಗಳು ಹಾಗೂ ಶಾಸನಬದ್ಧ ಸರಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಿನ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಿ ಮೂರು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ ಉಸ್ತುವಾರಿಗಾಗಿ ನೇಮಕಗೊಂಡಿರುವ ಉಪಸಮಿತಿ ಇಂದು ಸಭೆ ಸೇರಿ ನಿರ್ದೇಶನ ನೀಡಿತು.
ರಾಜ್ಯ ಸರಕಾರದ ಸರಕಾರಿ ಕಾಲೇಜುಗಳಲ್ಲಿ, ಅನುದಾನಿತ ಕಾಲೇಜುಗಳಲ್ಲಿ, ಅನುದಾನಿತ ತಾಂತ್ರಿಕ ಕಾಲೇಜುಗಳಲ್ಲಿ ಮತ್ತು ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ 446 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 436 ಒಟ್ಟು 882 ಹುದ್ದೆಗಳ ನೇಮಕಾತಿ ಬಾಕಿ ಇದೆ.
ಇಲಾಖಾವಾರು, ನಿಗಮವಾರು, ವಿಶ್ವವಿದ್ಯಾಲಯವಾರು ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗಾಗಿ ಕೈಗೊಂಡಿರುವ ಕ್ರಮಗಳನ್ನು ಸಮಿತಿಯು ವಿವರವಾಗಿ ಪರಿಶೀಲಿಸಿದೆ.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ರಾಜ್ಯ ಸಚಿವ ಸಂಪುಟದ ಆರು ಸದಸ್ಯರಿದ್ದಾರೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಮೀನುಗಾರಿಕಾ ಸಚಿವ ಎಸ್ ಅಂಗಾರ, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪೌರಾಡಳಿತ ಸಚಿವ ಎಂ ಟಿ ನಾಗರಾಜ್ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಬಿ.ಶ್ರೀರಾಮುಲು ಸಭೆಯಲ್ಲಿ ಹಾಜರಿದ್ದರು.