ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಬೃಹತ್ ಮಿಲಿಟರಿ ಶಾಲೆ ಪ್ರಾರಂಭ-ಬೊಮ್ಮಾಯಿ |ಎಲ್ಲಾ ಶಾಲಾ-ಕಾಲೇಜುಗಳಲ್ಲಿ ರಾಯಣ್ಣನ ಭಾವಚಿತ್ರ ಹಾಕಲು ಇಂದೇ ಆದೇಶ
ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತಾಡಿದ ಮುಖ್ಯಮಂತ್ರಿ, ರಾಯಣ್ಣನ ಹೆಸರಿನಲ್ಲಿ ಸರ್ಕಾರ 180 ಕೋಟಿ ರೂ.ಗಳ ವೆಚ್ಚದಲ್ಲಿ ಬೃಹತ್ ಮಿಲಿಟರಿ ಶಾಲೆಯನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದರು.
191 ನೇ ಸ್ಮರಣೋತ್ಸವ ಅಂಗವಾಗಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಈ ಉದ್ದೇಶಕ್ಕಾಗಿ 55 ಕೋಟಿ ರೂ.ಗಳನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದು,ಈ ವರ್ಷ ಶಾಲೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ರಕ್ಷಣಾ ಇಲಾಖೆ ಶಾಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲು ಮಾತುಕತೆ ನಡೆದಿದೆ. ಪರಿಶೀಲನಾ ಕಾರ್ಯವೂ ನಡೆದಿದ್ದು, ರಕ್ಷಣಾ ಇಲಾಖೆ ಅದನ್ನು ಬಹುತೇಕವಾಗಿ ಮಿಲಿಟರಿ ಶಾಲೆಯಾಗಿ ಪರಿವರ್ತನೆ ಮಾಡಲಿದೆ. ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು 100 ಎಕರೆ ಪ್ರದೇಶದಲ್ಲಿ ಮಾಡಲಾಗುತ್ತಿದೆ ಎಂದರು.
ರಾಯಣ್ಣ ಹುತಾತ್ಮರಾದ ನಂದಗಡದಲ್ಲಿ ಅವರ ಸಮಾಧಿಯ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗುವುದು. ಅವರ ಹುಟ್ಟೂರು ಸಂಗೊಳ್ಳಿಯಲ್ಲಿ 10 ಎಕರೆ ಜಮೀನು ರಾಕ್ ಗಾರ್ಡನ್ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಮುಂದಿನ ಪೀಳಿಗೆಗೆ ರಾಯಣ್ಣನ ಜೀವನದ ಪರಿಚಯ ಮಾಡಿಕೊಡಲು ಈ ಸ್ಮಾರಕಗಳ ನಿರ್ಮಾಣವಾಗುತ್ತಿದೆ ಎಂದರು.ಕಳೆದ ಬಾರಿ ಸರ್ಕಾರವೇ ರಾಯಣ್ಣನ ಜನ್ಮದಿನಾಚರಣೆ ಮಾಡಲು ಮನವಿ ಬಂದ ಒಂದು ಗಂಟೆಯಲ್ಲಿ ಆದೇಶ ಹೊರಡಿಸಲಾಯಿತು ಎಂದರು.
ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಹಾಕಿಸಲು ಇಂದೇ ಆದೇಶ ಹೊರಡಿಸಲಾಗುವುದು ಎಂದು ಪ್ರಕಟಿಸಿದರು.ಕರ್ನಾಟಕದಲ್ಲಿ ಸ್ವತಂತ್ರ ಹೋರಾಟಗಾರರ ದೊಡ್ಡ ಇತಿಹಾಸವಿದೆ. ಬೆಂಗಳೂರಿನ ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಬೇಕು ಎಂಬ ಪ್ರಸ್ತಾಪವನ್ನು ಸಂಸದ ಪಿ.ಸಿ.ಮೋಹನ್ ಮಾಡಿದ್ದು ಈ ಬಗ್ಗೆ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.ನವದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆಯಿದೆ. ಚನ್ನಮ್ಮ ಇದ್ದ ಕಡೆ ರಾಯಣ್ಣ ಸಹ ಇರಬೇಕು. ನವದೆಹಲಿಯ ಸೂಕ್ತ ಸ್ಥಳದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಈಗಾಗಲೇ ಸಂಬಂಧ ಪಟ್ಟವರಿಗೆ ಪತ್ರ ಬರೆಯಲಾಗಿದೆ ಎಂದರು.