ಸಂಪ್ರದಾಯವನ್ನೇ ಮುರಿದ ಸಂಸದ ತೇಜಸ್ವಿ ಸೂರ್ಯ!! ಅಯ್ಯಪ್ಪ ಮಾಲಾಧಾರಿಯಾಗಿ ಚಪ್ಪಲಿ ಧರಿಸಿ ನಡೆದಾಡಿದ ವಿಚಾರ
ಶಬರಿಮಲೆ ಅಯ್ಯಪ್ಪನ ವ್ರತ ಬೇರೆಲ್ಲಾ ವ್ರತ, ಆಚರಣೆಗಳಿಗಿಂತಲೂ ಭಿನ್ನ. ಶಬರಿಮಲೆಗೆ ತೆರಳುವ ಅಯ್ಯಪ್ಪ ಮಾಲಾಧಾರಿಗಳು ನಿಷ್ಠೆಯಿಂದ ಇರಬೇಕು, ಬರಿಗಾಲಲ್ಲಿ ನಡೆದಾಡಬೇಕು ಎಂಬಿತ್ಯಾದಿ ನಿಯಮಗಳಿದೆ. ಆದರೆ ಇಂತಹ ಕಟ್ಟುನಿಟ್ಟಿನ ನಿಯಮಗಳನ್ನು ಗಾಳಿಗೆ ತೂರಿ ಸಂಸದ ತೇಜಸ್ವಿ ಸೂರ್ಯ ಅಯ್ಯಪ್ಪ ಮಾಲೆ ಧರಿಸಿದ ಸಮಯದಲ್ಲಿ ಕಾಲಿಗೆ ಚಪ್ಪಲಿ ಹಾಕಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಅಯ್ಯಪ್ಪ ಮಾಲಾಧಾರಿಯಾಗಿ ಸಂಸದರು ಸಂಪ್ರದಾಯವನ್ನೇ ಮುರಿದಿದ್ದಾರೆ, ಈ ಮೂಲಕ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕೇವಲ ಕಾಂಗ್ರೆಸ್ ಮಾತ್ರವಲ್ಲದೇ ಅಯ್ಯಪ್ಪ ವೃತಾಧಾರಿ, ಅಯ್ಯಪ್ಪ ಭಕ್ತರು ಕೂಡಾ ತೇಜಸ್ವಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬರಿಗಾಲಲ್ಲಿ ಸನ್ನಿಧಾನಕ್ಕೆ ತೆರಳುವ ಬದಲು ಚಪ್ಪಲಿ ಧರಿಸಿ ತೆರಳಿದ್ದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರ ಸಣ್ಣತನವನ್ನು ಎತ್ತಿ ತೋರಿಸುವಂತಿದ್ದು, ಈ ವಿಚಾರ ನಿಧಾನಕ್ಕೆ ರಾಜಕೀಯವಾಗಿ ಸಂಘರ್ಷಕ್ಕೆ ಅವಕಾಶ ಮಾಡಿಕೊಟ್ಟಂತಿದೆ.