ಈ ಊರಲ್ಲಿ ನಡೆಯುತ್ತೆ ‘ಪ್ರೇಮಿಗಳ ಜಾತ್ರೆ’ |ಪ್ರೇಮಿಗಳಿಗಾಗಿಯೇ ನಡೆಯೋ ಈ ಜಾತ್ರೆಯ ವಿಶೇಷತೆ ಇಲ್ಲಿದೆ ನೋಡಿ..
ದೇವಾಲಯಗಳಲ್ಲಿ ವರ್ಷಪ್ರತೀ ದೇವರ ಉತ್ಸವ, ತೇರು, ಹೀಗೆ ಜಾತ್ರೆ ನಡೆಯೋದು ಪದ್ಧತಿ. ಆದ್ರೆ ಈ ಜಾತ್ರೆ ಇಡೀ ಊರಿಗೆ ಊರಿಗೆ ಹಬ್ಬ. ಎಲ್ಲರೂ ದೇವರನ್ನು ಕಣ್ತುಂಬಿಕೊಳ್ಳಲು ಇರುವ ಸುಸಂದರ್ಭ. ಆದರೆ ಇಲ್ಲೊಂದು ಕಡೆ ನಡೆಯೋ ಜಾತ್ರೆ ‘ಪ್ರೇಮಿಗಳ ಜಾತ್ರೆ’ ಅಂತೆ!!
ಇದೇನು ಪ್ರೇಮಿಗಳ ಜಾತ್ರೆ ಅಂದುಕೊಳ್ಳಬೇಡಿ.ಈ ಜಾತ್ರೆಗೆ ಅದರದ್ದೇ ಆದ ಇತಿಹಾಸವಿದ್ದು ಆರು ಶತಮಾನದ ಹಿಂದಿನಿಂದಲೂ ಆಚರಿಸಿಕೊಂಡು ಬಂದ ಹಬ್ಬವಾಗಿದೆ.ಹೌದು ಈ ವಿಶೇಷ ಜಾತ್ರೆ ಉತ್ತರ ಪ್ರದೇಶದ ಬಂಡಾ ನಗರದ ಕೆನ್ ನದಿಯ ದಡದಲ್ಲಿರುವ ಭೂರಗಢ್ ಕೋಟೆಯಲ್ಲಿ ಸಂಕ್ರಾಂತಿಯ ಎರಡು ದಿನಗಳು ವಿಶೇಷವಾಗಿ ಈ ಜಾತ್ರೆ ನಡೆಯುತ್ತದೆ. ಇಲ್ಲಿ ನಟಾಬಲಿ ಬಾಬಾನ ದೇವಾಲಯ ಇದ್ದು,ಇದು ಪ್ರೇಮಿಗಳ ಕಾಮನೆಗಳನ್ನು ಈಡೇರಿಸುವ ದೇವತೆ ಎಂಬುದು ನಂಬಿಕೆ. ಆದ್ದರಿಂದ ದೂರ ದೂರದ ಊರಿಗಳಿಂದ ಜನರು ಅದರಲ್ಲಿಯೂ ಹೆಚ್ಚಾಗಿ ಪ್ರೇಮಿಗಳು ನಟಾಬಲಿ ಬಾಬಾಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.
ಭೂರಗಢ ಕೋಟೆಯ ಅಡಿ ನಿರ್ಮಿಸಲಾದ ನಟಾಬಲಿ ಬಾಬಾನ ವಿಶೇಷ ಎಂದರೆ ಇಲ್ಲಿ ಯಾವುದೇ ಹರಕೆ ಹೊತ್ತರೂ ಈಡೇರುತ್ತೆಯಂತೆ. ಪ್ರೇಮಿಗಳ ಬದುಕಿನಲ್ಲಿ ಏನಾದರೂ ಸಮಸ್ಯೆ ಬಂದರೆ ಈ ಜಾತ್ರೆಯ ಸಂದರ್ಭದಲ್ಲಿ ಹರಕೆ ಹೊತ್ತರೆ ಸಾಕು, ಎಲ್ಲವೂ ಈಡೇರುತ್ತದೆ. ಪ್ರೀತಿಯಲ್ಲಿ ಯಶಸ್ಸು ಸಿಗುತ್ತದೆ ಎಂಬ ಬಲವಾದ ನಂಬಿಕೆ ಇರುವ ಕಾರಣ, ಪ್ರೇಮಿಗಳು ಜಾತ್ರೆಯ ದಿನದಂದು ಇಲ್ಲಿಗೆ ಭೇಟಿ ನೀಡುತ್ತಾರೆ.
ಈ ದೇವಾಲಯದ ಹಿಂದಿರುವ ಇತಿಹಾಸ :
ಇಲ್ಲಿಯ ಮಹೊಬಾ ಜಿಲ್ಲೆಯ ಸುಗೀರಾ ಎಂಬ ಊರಿನ ನಿವಾಸಿಯಾದ ಅರ್ಜುನ್ ಸಿಂಗ್ ಭುರಗಢ ಕೋಟೆಯ ರಾಜನಾಗಿದ್ದ. ಬಿರಾನ್ ಎಂಬ ನಾಟ್ ಜಾತಿಯ 21 ವರ್ಷದ ಯುವಕ ಇಲ್ಲಿ ಸೇವಕನಾಗಿದ್ದ. ಈ ಯುವಕನಿಗೆ ತಂತ್ರ – ಮಂತ್ರಗಳ ಬಗ್ಗೆ ಸಾಕಷ್ಟು ಅರಿವಿತ್ತು. ಆತ ರಾಜ ಅರ್ಜಿನ್ ಸಿಂಗ್‌ನ ಮಗಳನ್ನು ಪ್ರೀತಿಸಿದ್ದ.ಈತನನ್ನು ಮದುವೆಯಾಗುವುದಾಗಿ ಅಪ್ಪನಿಗೆ ರಾಜನ ಮಗಳು ಹೇಳಿದಾಗ ರಾಜಾ ಅರ್ಜುನ್ ಸಿಂಗ್ ಒಂದು ಷರತ್ತು ಹಾಕಿದ. ಅದೇನೆಂದರೆ ಬಂಬೇಶ್ವರ ಪರ್ವತದಿಂದ ನದಿಯ ಸಮೀಪ ಇರುವ ಕೋಟೆಗೆ ನೂಲಿನ ದಾರದ ಹಗ್ಗವನ್ನು ಹತ್ತಿ ಕೋಟೆಗೆ ಬಂದರೆ ಮಗಳನ್ನು ಮದುವೆಯಾಗಬಹುದು ಎಂದು. ಅದಕ್ಕೆ ಒಪ್ಪಿದ ಬಿರಾನ್ ಪರ್ವತದಿಂದ ಹತ್ತಿಯ ಹಗ್ಗದ ಸಹಾಯದಿಂದ ನದಿಯನ್ನು ದಾಟಿ ಕೋಟೆ ತಲುಪಲು ಇನ್ನೇನು ಯಶಸ್ವಿಯಾಗುತ್ತಾನೆ ಎಂದಾಗಲೇ ಕುತಂತ್ರದಿಂದ ರಾಜ ಹಗ್ಗವನ್ನು ಕತ್ತರಿಸುತ್ತಾನೆ. ಬಿರಾನ್ ಬಿದ್ದು ಸಾಯುತ್ತಾನೆ.
ಇದನ್ನು ಅರಗಿಸಿಕೊಳ್ಳಲಾಗದ ರಾಜನ ಮಗಳು ಕೋಟೆಯಿಂದ ಹಾರಿ ಪ್ರಾಣ ಬಿಡುತ್ತಾಳೆ.
ಇದರಿಂದ ನೊಂದುಕೊಂಡ ರಾಜ ಈ ಪ್ರೇಮಿಗಳಿಗಾಗಿ ಒಟ್ಟಿಗೇ ಸಮಾಧಿ ನಿರ್ಮಿಸುತ್ತಾನೆ. ಅಲ್ಲಿಂದ ಪ್ರತಿ ವರ್ಷ ಸಂಕ್ರಾಂತಿಯ ಆಸುಪಾಸು ಇಲ್ಲಿ ಜಾತ್ರೆ ನಡೆದು ಪ್ರೇಮಿಗಳ ಬಯಕೆ ಈಡೇರಿಸಲಾಗುತ್ತದೆ ಎಂಬ ನಂಬಿಕೆ ಇದೆ.