ವಿದ್ಯಾಭ್ಯಾಸವಿಲ್ಲದೆ ಅಂಧಕಾರದಲ್ಲಿ ಮುಳುಗಿದ್ದ ಅಫ್ಘಾನಿಸ್ತಾನದ ಮಕ್ಕಳ ಬಾಳಲ್ಲಿ ಕೊನೆಗೂ ಮೂಡಿತು ವಿದ್ಯೆಯ ಬೆಳಕು |ಮುಚ್ಚಿದ್ದ ಶಾಲಾ ಬಾಗಿಲು ಮಾರ್ಚ್ ನಿಂದ ಓಪನ್
ಇಷ್ಟು ದಿನ ಕತ್ತಲಾಗಿದ್ದ ಅಫ್ಘಾನಿಸ್ತಾನದ ಮಕ್ಕಳ ಬಾಳಲ್ಲಿ ಇದೀಗ ಬೆಳಕಿನ ಬಾಗಿಲು ತೆರೆಯುತ್ತಿದೆ. ವಿದ್ಯಾಭ್ಯಾಸವಿಲ್ಲದೆ ಅಂಧಕಾರದಲ್ಲಿ ಮುಳುಗಿದ್ದ ಮಕ್ಕಳಿಗೆ ಶಾಲೆಯ ಬಾಗಿಲು ಕೊನೆಗೂ ತೆರೆಯುತ್ತಿದೆ. ಹೌದು, ಬಾಲಕಿಯರು ಮತ್ತು ಬಾಲಕರಿಗೆ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳನ್ನು 2022ರ ಮಾರ್ಚ್ನಿಂದ ಮತ್ತೆ ತೆರೆಯಲಾಗುತ್ತದೆ ಎಂದು ತಾಲಿಬಾನ್ ತಿಳಿಸಿದೆ.
ಮಾಹಿತಿ ಮತ್ತು ಸಂಸ್ಕೃತಿಯ ಉಪಮಂತ್ರಿ ಮತ್ತು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ನ ವಕ್ತಾರ ಜಬೀವುಲ್ಲಾ ಮುಜಾಹಿದ್ ಈ ಕುರಿತಂತೆ ಮಾತನಾಡಿ, ತಾಲಿಬಾನ್ ಶಿಕ್ಷಣದ ವಿರುದ್ಧವಲ್ಲ. ಆದರೆ ಹುಡುಗರು ಮತ್ತು ಹುಡುಗಿಯರಿಗೆ ಶಾಲೆಗಳಲ್ಲಿ ಪ್ರತ್ಯೇಕವಾಗಿ ತರಗತಿ ನಡೆಸಬೇಕು ಎಂದಿದ್ದಾರೆ.
ಎರಡು ತಿಂಗಳಲ್ಲಿ ಉನ್ನತ ಶಾಲೆಗಳು ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಪುನಃ ತೆರೆಯಲು ಶಿಕ್ಷಣ ಸಚಿವಾಲಯ ಮತ್ತು ಉನ್ನತ ಶಿಕ್ಷಣ ಸಚಿವಾಲಯವು ಶ್ರಮಿಸುತ್ತಿದೆ. ಅನೇಕ ಪ್ರದೇಶಗಳಲ್ಲಿ ಪ್ರೌಢ ಶಾಲೆಗಳನ್ನು ಪುನಃ ತೆರೆಯಲಾಗಿದೆ ಮತ್ತು ಕೆಲವು ಭಾಗಗಳಲ್ಲಿ ಆರ್ಥಿಕ ಸಮಸ್ಯೆಗಳಿಂದ ಇನ್ನೂ ಶಾಲೆಯನ್ನು ಮುಚ್ಚಲಾಗಿದೆ ಎಂದು ಹೇಳಿದ್ದಾರೆ.
ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ತರಗತಿಗಳನ್ನು ನಡೆಸಲಾಗುತ್ತದೆ ಮತ್ತು ಅಫ್ಘಾನಿಸ್ತಾನದ ಸುತ್ತಲೂ ಹೆಣ್ಣುಮಕ್ಕಳಿಗೆ ಹೆಚ್ಚಿನ ಹಾಸ್ಟೆಲ್ಗಳನ್ನು ನಿರ್ಮಿಸುವ ಕೆಲಸಗಳು ನಡೆಯುತ್ತಿದೆ. ಅಫ್ಘಾನಿಸ್ತಾನದಾದ್ಯಂತ 150 ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದ್ದು, 40 ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಸಾರ್ವಜನಿಕ ಶಾಲೆಗಳಲ್ಲಿ ಹುಡುಗಿಯರಿಗೆ ಆರನೇ ತರಗತಿಯವರೆಗೂ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ ಹಲವೆಡೆ ಹೆಣ್ಣು ಮಕ್ಕಳಿಗೆ 7ನೇ ತರಗತಿಯ ನಂತರ ಶಾಲೆಗೆ ಹೋಗಲು ಅನುಮತಿ ನೀಡಲಾಗಿಲ್ಲ. ಅಲ್ಲದೇ ದೇಶದಲ್ಲಿ ಬಾಲಕಿಯರ ಶಾಲೆಗಳನ್ನು ಮುಚ್ಚುತ್ತಿರುವುದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.