ಮಂಗಳೂರು: ಹೆಸರಾಂತ ಹೋಟೆಲ್ ಒಂದರಲ್ಲಿ ಹಲಾಲ್ ಹೆಸರಲ್ಲಿ ಆಹಾರಕ್ಕೆ ಉಗುಳು!! ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ ನಿಜಕ್ಕೂ ಅಲ್ಲಿ ನಡೆದಿದೆಯೇ!??
ಮಂಗಳೂರು: ನಗರದ ಉರ್ವಸ್ಟೋರ್ ನಲ್ಲಿರುವ ಹೆಸರಾಂತ ರೆಸ್ಟೋರೆಂಟ್ ಒಂದರಲ್ಲಿ ಹಲಾಲ್ ಹೆಸರಲ್ಲಿ ಊಟಕ್ಕೆ ಉಗುಳುತ್ತಿದ್ದಾರೆ, ಇದನ್ನೆಲ್ಲಾ ಕಣ್ಣಾರೆ ಕಂಡಿದ್ದೇನೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಟ್ಟಿದ್ದು, ವಿಷಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಇದೊಂದು ಸುಳ್ಳು ಆರೋಪವೆಂದು ಹೇಳಲಾಗಿದೆ.ಸದ್ಯ ಹೋಟೆಲ್ ಮಾಲೀಕ ಪ್ರಶಾಂತ್ ಆಳ್ವ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ವಿಷಯವೇನು?
ವ್ಯಕ್ತಿಯೊರ್ವರು ಸಂಜೆ ಸುಮಾರು ತನ್ನ ಗೆಳೆಯರೊಂದಿಗೆ ರೆಡ್ ಚಿಲ್ಲಿ ರೆಸ್ಟೋರೆಂಟ್ ಗೆ ತೆರಳಿದ್ದು ಶವರ್ಮ ಆರ್ಡರ್ ಮಾಡಿದ್ದರಂತೆ. ಹೀಗೆ ಆರ್ಡರ್ ಮಾಡಿದ ತಿನಿಸಿಗಾಗಿ ಕಾಯುತ್ತಾ ಕುಳಿತಿರುವಾಗ ಪುಟ್ಟ ಕೋಣೆಯೊಂದರಲ್ಲಿ ಅದನ್ನು ತಯಾರಿಸುವಾತ ಅಡುಗೆಗಳಿಗೆ ಎಂಜಲು ಉಗುಳುತ್ತಿರುವುದನ್ನು ಗಮನಿಸಿದ್ದೇನೆ, ಹಾಗೂ ಈ ಬಗ್ಗೆ ಮಾಲಕರಲ್ಲಿ ವಿಚಾರಿಸಿದಾಗ ಗದರಿಸಿ ಬೆದರಿಕೆ ಹಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಮೊದಲಿಗೆ ಶ್ರೀ ಕಾಂತ್ ಕಾಮತ್ ಎಂಬವರ ಫೇಸ್ ಬುಕ್ ಪೇಜ್ ನಲ್ಲಿ ಹರಿದಾಡಿದ ವಿಷಯವು, ಬಳಿಕ ವಾಟ್ಸಪ್ ಗ್ರೂಪ್ ಒಂದರಲ್ಲಿ ಹರಿದಾಡಿದ್ದು, ತದನಂತರ ಇತರ ಗ್ರೂಪ್ ಗಳಿಗೂ ಫಾರ್ ವಾರ್ಡ್ ಆಗಿದೆ.ಈ ವಿಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಕೆಲವೇ ಕ್ಷಣಗಳಲ್ಲಿ ಸುದ್ದಿಯು ಎಲ್ಲೆಡೆ ಹಬ್ಬಿದೆ.
ವಿಚಾರ ತಿಳಿಯುತ್ತಿದ್ದಂತೆ ರೆಸ್ಟೋರೆಂಟ್ ಮಾಲಕರಾದ ಪ್ರಶಾಂತ್ ಆಳ್ವ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕಳೆದ ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆಯು ಪ್ರಾಮಾಣಿಕವಾಗಿ ಗ್ರಾಹಕ ಸೇವೆ ನೀಡುತ್ತಿದೆ. ಅದಲ್ಲದೇ ಇಲ್ಲಿ ಹಲಾಲ್ ಬೋರ್ಡ್ ಇದ್ದಮಾತ್ರಕ್ಕೆ ನಾವು ಉಗುಳು ಹಾಕುವುದಿಲ್ಲ, ಯಾರೋ ಕಿಡಿಗೇಡಿಗಳು ಸಂಸ್ಥೆಯ ಏಳಿಗೆ ಸಹಿಸದೆ ಈ ರೀತಿಯಾಗಿ ಸುಳ್ಳು ಸುದ್ದಿ ಹರಿಯಬಿಟ್ಟಿದ್ದಾರೆ ಎಂದಿದ್ದಾರೆ.
ಉಗುಳುವುದು ಹಲಾಲ್ ಸಂಪ್ರದಾಯವೇ?
ಕೇರಳ ಮೂಲದವರಾದ ಎಸ್.ಜೆ.ಆರ್ ಕುಮಾರ್ ಎಂಬವರು ಹಲಾಲ್ ಬಗ್ಗೆ ಹಾಗೂ ಆ ಸಂಪ್ರದಾಯದ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದು, ಹಲಾಲ್ ನಲ್ಲಿ ಉಗುಳು ಹಾಕುವ ಸಂಪ್ರದಾಯವಿಲ್ಲ ಎಂದು ಕೋರ್ಟ್ ಹೇಳಿದೆ.
ಒಟ್ಟಾರೆಯಾಗಿ ಹಲಾಲ್ ವಿಚಾರ ಕಳೆದ ಕೆಲ ಸಮಯಗಳಿಂದ ಭಾರೀ ಮುಂಚೂಣಿಯಲ್ಲಿದ್ದು, ಹಲಾಲ್ ಎಂಬ ಸಂಪ್ರದಾಯ ತಿನ್ನುವ ಆಹಾರಗಳಿಗೆ ಉಗುಳುವುದು ಎಂದೇ ನಂಬಿರುವ ಪ್ರಜ್ಞಾವಂತ ಜನತೆಗೆ ಹಲಾಲ್ ಸಂಪ್ರದಾಯದ ನಿಜ ವಿಚಾರ ತಿಳಿಯದೆ ಹಲಾಲ್ ಎಂಬುವುದೇ ಪ್ರಶ್ನೆಯಾಗುಳಿದಿದೆ.